ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ ಕೂದಲು ಉದುರಲು ಶುರುವಾಗುತ್ತದೆ.
ಸರಿಯಾದ ಪೋಷಕಾಂಶ ಸಿಗಲಿ ಎನ್ನುವ ಕಾರಣಕ್ಕೆ ಕೂದಲಿಗೆ ಮಸಾಜ್ ಮಾಡಲಾಗುತ್ತದೆ. ಆದ್ರೆ ಕೆಲವೊಂದು ಮಸಾಜ್ ಹಾಗೂ ಮಸಾಜ್ ಮಾಡುವ ರೀತಿಯಿಂದ ಕೂದಲು ಹುಟ್ಟುವ ಬದಲು ಉದುರಲು ಶುರುವಾಗುತ್ತದೆ. ಹಾಗಾಗಿ ಹೇಗೆಂದರೆ ಹಾಗೆ ಮಸಾಜ್ ಮಾಡುವುದು ಒಳ್ಳೆಯದಲ್ಲ.
ಕೂದಲಿಗೆ ಎಣ್ಣೆ ಹಚ್ಚುವುದರಿಂದ ಪೋಷಕಾಂಶ ಸಿಗುತ್ತದೆ. ಆದ್ರೆ ಅವಶ್ಯಕತೆಗಿಂತ ಹೆಚ್ಚು ಎಣ್ಣೆ ಹಚ್ಚುವುದು ಒಳ್ಳೆಯದಲ್ಲ. ಜೊತೆಗೆ ಗಟ್ಟಿಯಾಗಿ ಕೂದಲಿನ ಬುಡಕ್ಕೆ ಮಸಾಜ್ ಮಾಡಬಾರದು. ಇದರಿಂದ ಕೂದಲು ಬಲಗೊಳ್ಳುವ ಬದಲು ದುರ್ಬಲವಾಗುತ್ತದೆ.
ಮಸಾಜ್ ಮಾಡುವ ವೇಳೆ ಅಂಗೈ ಬಳಸಬೇಡಿ. ಬೆರಳುಗಳಿಂದ ಕೂದಲಿನ ಬುಡಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಅಂಗೈನಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿದ್ರೆ ಕೂದಲು ಉದುರುವುದು ಜಾಸ್ತಿಯಾಗುತ್ತದೆ.
ಕೂದಲಿನ ಬುಡವನ್ನು ಸ್ವಚ್ಛವಾಗಿ ತೊಳೆದ ನಂತ್ರ ಮಸಾಜ್ ಮಾಡಿ. ಕೂದಲು ಒಣ ಮತ್ತು ನಿರ್ಜೀವವಾಗಿದ್ದರೆ ವಾರಕ್ಕೆ ಎರಡು ಬಾರಿ ಮಸಾಜ್ ಮಾಡುವುದು ಒಳ್ಳೆಯದು.
ಮಾರುಕಟ್ಟೆಯಲ್ಲಿ ಮಸಾಜ್ ಗಾಗಿ ಸಾಕಷ್ಟು ತೈಲಗಳು ಸಿಗುತ್ತವೆ. ಆದ್ರೆ ಅದಕ್ಕೆ ಕೆಮಿಕಲ್ ಬೆರೆಸಿರುತ್ತಾರೆ. ಇದರಿಂದ ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ತೈಲದ ಬದಲು ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಆಯಿಲ್ ಬಳಸಿ. ಮೊಟ್ಟೆಯನ್ನು ಈ ಎಣ್ಣೆಗೆ ಬೆರೆಸಿ ಕೂಡ ನೀವು ಮಸಾಜ್ ಮಾಡಿಕೊಳ್ಳಬಹುದು.