ನೀವು ಸೇವಿಸುವ ಆಹಾರದಲ್ಲಿ ವಿಟಮಿನ್, ಕಾರ್ಬೋಹೈಡ್ರೇಟ್, ನೀರು, ಕೊಬ್ಬು ಹಾಗೂ ಲವಣಗಳು ಕಡ್ಡಾಯವಾಗಿ ಇರಲೇ ಬೇಕು. ಹೊಟ್ಟೆ ತುಂಬಾ ತಿಂದು ಜಡತ್ವ ಬೆಳೆಸಿಕೊಳ್ಳುವ ಬದಲು, ಬೇಕಾದಷ್ಟನ್ನೇ ಸೇವಿಸಿ ಆರೋಗ್ಯವಂತರಾಗಿರುವುದು ಮುಖ್ಯ.
ಸುಲಭವಾಗಿ ಜೀರ್ಣವಾಗುವ ಆಹಾರಗಳಿಗೆ ಮೊದಲ ಆದ್ಯತೆ ನೀಡಿ. ಲಘು ಆಹಾರಗಳು ಒಂದು ಗಂಟೆಯೊಳಗೆ ಜೀರ್ಣವಾಗುತ್ತವೆ. ನೀರು ಅರ್ಧ ಗಂಟೆಯೊಳಗೆ ಜೀರ್ಣವಾದರೆ ಸಕ್ಕರೆ ಸೇರಿಸದ ಜ್ಯೂಸ್ ಕೂಡಾ ನಲ್ವತ್ತು ನಿಮಿಷದೊಳಗೆ ಜೀರ್ಣವಾಗುತ್ತದೆ.
ಅದೇ ಎಣ್ಣೆಯಲ್ಲಿ ಕರಿದ ತಿಂಡಿಗಳು, ತುಪ್ಪ, ಮಾಂಸಾಹಾರ ಜೀರ್ಣವಾಗಲು ಐದರಿಂದ ಆರು ಗಂಟೆ ಹೊತ್ತು ಬೇಕಾಗುತ್ತದೆ. ಜೀರ್ಣಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಇವುಗಳ ಸೇವನೆಯ ಮೇಲೆ ನಿಗಾ ವಹಿಸುವುದು ಬಹಳ ಮುಖ್ಯ.
ಮನೆಯಲ್ಲೇ ಕೆಲಸ ಮಾಡುತ್ತಾ ಇರುವಾಗ ಪದೇ ಪದೇ ಏನನ್ನಾದರೂ ತಿನ್ನಬೇಕು ಎನಿಸುವುದು, ಅದಕ್ಕಾಗಿ ಕರಿದ ತಿಂಡಿಗಳನ್ನು ತಯಾರಿಸುವುದು, ಇಲ್ಲವೇ ಕೊಂಡು ತರುವುದನ್ನು ಮೊದಲು ನಿಲ್ಲಿಸಿ. ಹಸಿವಾದಾಗ ಧಾರಾಳವಾಗಿ ನೀರು ಕುಡಿಯಿರಿ. ಇಲ್ಲವೇ ಹಣ್ಣಿನ ರಸ ಸೇವಿಸಿ. ಇದರಿಂದ ದೇಹ ತೂಕವೂ ನಿಯಂತ್ರಣಕ್ಕೆ ಬರುತ್ತದೆ. ಆರೋಗ್ಯವೂ ಸ್ಥಿರವಾಗಿರುತ್ತದೆ.