
ಆರೋಗ್ಯವಾಗಿರಲು ದೇಹದಲ್ಲಿ ಉತ್ತಮ ಪ್ರಮಾಣದಲ್ಲಿ ರಕ್ತವಿರಬೇಕಾಗುತ್ತದೆ. ರಕ್ತದ ಒಂದು ಕಣದಲ್ಲಿ ಬದಲಾವಣೆಯಾದ್ರೂ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎ, ಬಿ, ಎಬಿ, ಒ ಪಾಸಿಟಿವ್ ಸೇರಿದಂತೆ ರಕ್ತದ ಅನೇಕ ಗುಂಪುಗಳ ಬಗ್ಗೆ ತಿಳಿದಿರುತ್ತೀರಿ. ಆದ್ರೆ ಗೋಲ್ಡನ್ ಬ್ಲಡ್ ಗ್ರೂಪ್ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ಗೋಲ್ಡನ್ ಬ್ಲಡ್ ಗ್ರೂಪನ್ನು ಅಪರೂಪದ ರಕ್ತ ಗುಂಪು ಎಂದು ಪರಿಗಣಿಸಲಾಗಿದೆ. ಇದರ ನಿಜವಾದ ಹೆಸರು Rh Null ಬ್ಲಡ್ ಗ್ರೂಪ್. ಅತ್ಯಂತ ಅಪರೂಪದ ರಕ್ತದ ಗುಂಪಾಗಿರುವುದ್ರಿಂದ ಇದನ್ನು ಗೋಲ್ಡನ್ ಬ್ಲಡ್ ಎಂದು ಕರೆಯಲಾಗುತ್ತದೆ. ಈ ರಕ್ತವನ್ನು ಯಾರಿಗೆ ಬೇಕಾದ್ರೂ ನೀಡಬಹುದು. ಇದು ಪ್ರತಿ ರಕ್ತ ಗುಂಪಿನೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
ಗೋಲ್ಡನ್ ಬ್ಲಡ್ ಹೊಂದಿರುವವರಲ್ಲಿ ಯಾವುದೇ ಪ್ರತಿಜನಕ (Antigen) ಕಂಡುಬರುವುದಿಲ್ಲ. ಗೋಲ್ಡನ್ ಬ್ಲಡ್ ಗ್ರೂಪ್ನಲ್ಲಿ ಪ್ರತಿಜನಕವಿರದ ಕಾರಣ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಇದೇ ಕಾರಣಕ್ಕೆ ಆ ರಕ್ತದ ಗುಂಪು ಹೊಂದಿರುವ ಜನರಿಗೆ ಎಚ್ಚರಿಕೆಯಿಂದಿರಲು ವೈದ್ಯರು ಸೂಚಿಸುತ್ತಾರೆ. ಉತ್ತಮ ಡಯಟ್ ಮತ್ತು ಕಬ್ಬಿಣವನ್ನು ಒಳಗೊಂಡಿರುವ ಹೆಚ್ಚು ಹೆಚ್ಚು ಆಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ.
ಸಂಶೋಧನೆಯೊಂದರ ಪ್ರಕಾರ, ಈ ರಕ್ತವು ಕೇವಲ 43 ಜನರಲ್ಲಿ ಕಂಡುಬಂದಿದೆ. ಇವರಲ್ಲಿ ಬ್ರೆಜಿಲ್, ಕೊಲಂಬಿಯಾ, ಜಪಾನ್, ಐರ್ಲೆಂಡ್ ಮತ್ತು ಅಮೆರಿಕದ ಜನರು ಸೇರಿದ್ದಾರೆ. ಹೆಚ್ಚು ರಕ್ತದಾನ ಮಾಡುವಂತೆ ಇವರಿಗೆ ಪ್ರೋತ್ಸಾಹ ನೀಡಲಾಗುತ್ತದೆ.