ಉಡುಪಿ ಜಿಲ್ಲೆಯ ಕೊಲ್ಲೂರು ಎಂದಾಕ್ಷಣ ನೆನಪಾಗೋದೇ ಶ್ರೀ ಮೂಕಾಂಬಿಕಾ ದೇವಿ. ತನ್ನ ಅಗಮ್ಯ ಶಕ್ತಿಯ ಮೂಲಕ ಮೂಕಾಂಬಿಕಾ ದೇವಿ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಭಕ್ತರನ್ನ ಹೊಂದಿದ್ದಾಳೆ. ಈ ತಾಯಿ ನೆಲೆಸಿರುವ ಕೊಡಚಾದ್ರಿ ಬೆಟ್ಟವು ನೋಡೋದೇ ಒಂದು ಪರಮಾನಂದ.
ಕೊಡಚಾದ್ರಿ ಚಾರಣ ಪ್ರಿಯರ ಆಯ್ಕೆಯಾಗಿದ್ದರೂ ಸಹ ಇದು ಚಾರಣ ಪ್ರಿಯರಿಗೆ ಹೆಚ್ಚು ಸೂಕ್ತ ಎಂದು ಹೇಳಲು ಆಗೋದಿಲ್ಲ. ಇಲ್ಲಿನ ಕಾಡಿನ ದಾರಿ ಕೊಂಚ ದುರ್ಗಮವಾಗಿರೋದ್ರಿಂದ ಕೊಡಚಾದ್ರಿ ಟ್ರಕ್ಕಿಂಗ್ ಮುನ್ನ ಯೋಚನೆ ಮಾಡೋದು ಒಳಿತು. ಅಲ್ಲದೇ ಇಲ್ಲಿ ಕಾಳಿಂಗ ಸರ್ಪ, ಕಾಡೆಮ್ಮೆ ಹಾಗೂ ಹೆಬ್ಬಾವುಗಳೂ ಇದೆ ಅನ್ನೋದನ್ನ ಕಡೆಗಣಿಸುವಂತಿಲ್ಲ.
ಕೊಡಚಾದ್ರಿಗೆ ಭೇಟಿ ನೀಡಬೇಕು ಎಂದು ನೀವು ಬಯಸಿದ್ದಲ್ಲಿ ಅಕ್ಟೋಬರ್ನಿಂದ ಮಾರ್ಚ್ ನಿಮಗೆ ಸೂಕ್ತ ಸಮಯವಾಗಿದೆ. ಪ್ರಕೃತಿಯ ಅಗಾಧ ಸೌಂದರ್ಯವನ್ನ ಹೊಂದಿರುವ ಕೊಡಚಾದ್ರಿ ಚಾರಣ ನಿಮಗೆ ನಿರಾಶೆ ಉಂಟು ಮಾಡುವ ಮಾತು ಇಲ್ಲವೇ ಇಲ್ಲ. ಅದರಲ್ಲೂ ಕೊಡಚಾದ್ರಿಯ ಸೂರ್ಯಾಸ್ತವನ್ನ ನೋಡಲೆಂದೇ ಇಲ್ಲಿಗೆ ಪ್ರವಾಸಿಗರು ಆಗಮಿಸ್ತಾರೆ.
ಕೊಡಚಾದ್ರಿ ಬೆಟ್ಟದ ಮೇಲೆ ನಿಮಗೆ ಸರ್ವಜ್ಞ ಪೀಠವೆಂಬ ದೇವಾಲಯ ಸಿಗಲಿದೆ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ನಂಬಿಕೆಯಿದೆ. ಕೊಡಚಾದ್ರಿ ಬೆಟ್ಟ ಶಿವಮೊಗ್ಗ ಜಿಲ್ಲೆಯ ಮೂಕಾಂಬಿಕಾ ವನ್ಯ ಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರಿದೆ.
ಶ್ರೀ ಕ್ಷೇತ್ರ ಕೊಲ್ಲೂರಿಗೆ ಬಸ್ ಸೌಕರ್ಯವಿದೆ. ಇಲ್ಲಿಂದ ನಿಮಗೆ ಖಾಸಗಿ ವಾಹನಗಳು ಬಾಡಿಗೆಗೆ ಲಭ್ಯವಿದೆ. ನೀವು ಕೊಡಚಾದ್ರಿಯನ್ನ ಖಾಸಗಿ ವಾಹನಗಳ ಸಹಾಯದಿಂದಲೂ ತಲುಪಬಹುದಾಗಿದೆ.