ದೇಹದ ತೂಕ ಏರಿಕೆಯಾಗ್ತಿದೆ. ಏನು ಕ್ರಮ ಕೈಗೊಂಡರೂ ಕಡಿಮೆಯಾಗ್ತಿಲ್ಲ ಅಂತಾ ತಲೆಕೆಡಿಸಿಕೊಳ್ತಿದ್ದೀರಾ..? ಸ್ಥೂಲಕಾಯದಿಂದಾಗಿ ಹೃದಯಾಘಾತ, ರಕ್ತದೊತ್ತಡದಂತಹ ಕಾಯಿಲೆಗಳು ಬರೋದ್ರಿಂದ ದೇಹದ ತೂಕ ಇಳಿಸಿಕೊಳ್ಳದೇ ಬೇರೆ ದಾರಿ ಇಲ್ಲ. ದೇಹದ ತೂಕ ಇಳಿಸಿಕೊಳ್ಳುವ ಮುನ್ನ ಯಾವ ಕಾರಣಕ್ಕೆ ನಿಮ್ಮ ದೇಹ ತೂಕ ಏರಿಕೆಯಾಗ್ತಿದೆ ಅನ್ನೋದನ್ನೂ ನೀವು ತಿಳಿದುಕೊಳ್ಳಲೇಬೇಕು.
ನಿಮ್ಮ ದೇಹದ ತೂಕ ಏರಿಕೆಗೆ ಮುಖ್ಯ ಕಾರಣ ಅಂದರೆ ಅನಿಯಮಿತ ಹಾಗೂ ಅವೈಜ್ಞಾನಿಕ ಆಹಾರ ಪದ್ಧತಿ. ಒಂದು ದಿನದಲ್ಲಿ ದೇಹಕ್ಕೆ ಎಷ್ಟು ಆಹಾರದ ಅಗತ್ಯ ಇದೆಯೋ ಅದಕ್ಕಿಂತ ಹೆಚ್ಚು ಕ್ಯಾಲರಿ ದೇಹಕ್ಕೆ ಹೋಯ್ತು ಅಂದರೆ ನೀವು ದಪ್ಪವಾಗ್ತೀರಾ.
ನಿಮ್ಮ ಪೋಷಕರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅನುವಂಶೀಯವಾಗಿ ಈ ಸಮಸ್ಯೆ ನಿಮಗೂ ಬರಬಹುದು.
ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಾದಾಗ ಕುಶಿಂಗ್ ಸಿಂಡ್ರೋಮ್ ಎಂಬ ಸಮಸ್ಯೆ ಉಂಟಾಗುತ್ತೆ. ಇದರಿಂದಾಗಿ ಸೊಂಟದ ಮೇಲಿನ ಭಾಗದಲ್ಲಿ ಕೊಬ್ಬು ಹೆಚ್ಚಾಗುತ್ತ ಹೋಗುತ್ತೆ. ಆದರೆ ಕೈ ಕಾಲು ತೆಳ್ಳಗೆ ಇರುತ್ತೆ. ಈ ಸಮಸ್ಯೆ ಇರುವವರಿಗೆ ಪೋಷಕಾಂಶಗಳು ದೇಹದ ಎಲ್ಲಾ ಭಾಗಕ್ಕೂ ಹಂಚಿಕೆ ಆಗೋದಿಲ್ಲ.
ನಿದ್ರಾ ಹೀನತೆ ಕೂಡ ನಿಮಗೆ ಸ್ಥೂಲಕಾಯದ ಸಮಸ್ಯೆ ತಂದೊಡ್ಡಬಹುದು. ನೀವು ಒತ್ತಡದಲ್ಲಿದ್ದರೆ ಇಲ್ಲವೇ ಸುಸ್ತಾಗಿದ್ದರೆ ನಿಮಗೆ ನಿದ್ರಾ ಹೀನತೆ ಉಂಟಾಗುತ್ತೆ. ಇದರಿಂದ ದೇಹದ ತೂಕ ಏರಿಕೆಯಾಗಿಬಿಡುತ್ತೆ.