ಮನೆಯ ಹಣಕಾಸಿನ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಮಹಿಳೆಯರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದ್ರೆ ಬಹುತೇಕ ಮಹಿಳೆಯರು ಈ ವಿಷ್ಯದಲ್ಲಿ ಹಿಂದುಳಿದಿದ್ದಾರೆ. ಮಹಿಳೆಯರು ಮನೆಯ ಹಣಕಾಸಿನ ವ್ಯವಹಾರದ ಜವಾಬ್ದಾರಿಯನ್ನು ಪತಿಗೆ ನೀಡುವುದು ಹೆಚ್ಚು. ಆದ್ರೆ ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿ ಹೆಗಲಿಗೆ ಬಂದಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅನೇಕ ಕಾರಣಗಳಿಗೆ ಮಹಿಳೆಯರು ಹಣಕಾಸಿನ ನಿರ್ವಹಣೆಯಿಂದ ಹಿಂದೆ ಸರಿಯುತ್ತಾರೆ.
ಕಚೇರಿಗೆ ಹೋಗಿ ಕೆಲಸ ಮಾಡುವ ಮಹಿಳೆಯರು ಕೂಡ ಹಣಕಾಸಿನ ನಿರ್ವಹಣೆ ತಪ್ಪಿಸಿಕೊಳ್ಳುತ್ತಾರೆ. ತಂದೆ, ಪತಿ ಇಲ್ಲವೆ ಸಹೋದರನಿಗೆ ಜವಾಬ್ದಾರಿ ನೀಡುತ್ತಾರೆ. ಹಣಕಾಸು ವ್ಯವಹಾರ, ತಲೆನೋವಿನ ವ್ಯವಹಾರವೆಂದು ಅವರು ಭಾವಿಸುತ್ತಾರೆ.
ಮಹಿಳೆಯರು ಸಂಬಳ ವಿಷ್ಯದಲ್ಲೂ ಹೆಚ್ಚು ಚರ್ಚೆ ಮಾಡುವುದಿಲ್ಲ. ಇದೇ ಕಾರಣಕ್ಕೆ ಉತ್ತಮ ಕೆಲಸಗಾರ್ತಿ ಕೂಡ ಪುರುಷರಿಗಿಂತ ಕಡಿಮೆ ಸಂಬಳ ಪಡೆಯುತ್ತಾಳೆ. ಇದು ಅನೇಕ ಅಧ್ಯಯನಗಳಿಂದ ಬಹಿರಂಗವಾಗಿದೆ. ತಮ್ಮ ಸಾಮರ್ಥ್ಯದ ಬಗ್ಗೆ ಮಹಿಳೆಯರಿಗೆ ಆತ್ಮವಿಶ್ವಾಸ ಕಡಿಮೆ. ಇದೇ ಕಾರಣಕ್ಕೆ ಅವರು ಚೌಕಾಸಿ ಮಾಡುವುದಿಲ್ಲ.
ಮಹಿಳೆಯರು ಹಣದ ಬಗ್ಗೆ ಮಾತನಾಡಲು ಮುಂದೆ ಬರುವುದಿಲ್ಲ. ಹಣದ ವಿಷ್ಯದಲ್ಲಿ ಮಹಿಳೆಯರು ಕುಟುಂಬ ಮತ್ತು ಸ್ನೇಹಿತರ ಸಹಾಯ ಪಡೆಯುತ್ತಾರೆ. ಮಹಿಳೆಯರ ಆರ್ಥಿಕ ನಿರ್ಧಾರಗಳನ್ನು ಭಾವನೆಗಳ ಜೊತೆ ನೋಡುತ್ತಾರೆ.
ಭಾರತೀಯರಿಗೆ ಚಿನ್ನದ ಮೋಹ ಹೆಚ್ಚು. ಚಿನ್ನದ ಮೇಲೆ ಹೂಡಿಕೆ ಮಾಡುವುದು ಅಷ್ಟು ಸೂಕ್ತ ವ್ಯವಹಾರವಲ್ಲ. ಚಿನ್ನದ ಆಭರಣಗಳನ್ನು ಖರೀದಿಸುವುದನ್ನು ಹೂಡಿಕೆ ಎಂದು ಕರೆಯಲಾಗುವುದಿಲ್ಲ. ಆದ್ರೆ ಮಹಿಳೆಯರು ಹೆಚ್ಚಿನ ಆಭರಣ ಖರೀದಿಯನ್ನೇ ಹೂಡಿಕೆ ಎಂದು ಭಾವಿಸುತ್ತಾರೆ. ಬಹುತೇಕ ಮಹಿಳೆಯರು ಹೂಡಿಕೆ ಬಗ್ಗೆ ಸರಿಯಾಗಿ ತಿಳಿಯದೆ ಮುಂದೆ ತೊಂದರೆ ಅನುಭವಿಸುತ್ತಾರೆ. ಉತ್ತಮ ಭವಿಷ್ಯಕ್ಕಾಗಿ ಮಹಿಳೆಯರು ಹಣಕಾಸಿನ ವ್ಯವಹಾರವನ್ನು ತಿಳಿದಿರಬೇಕಾಗುತ್ತದೆ.