ಖಾಲಿ ಹೊಟ್ಟೆಯಲ್ಲಿ ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಾ ಅನ್ನೋದ್ರ ಆಧಾರದ ಮೇಲೆ ನಿಮ್ಮ ಆರೋಗ್ಯ ಅವಲಂಭಿತವಾಗಿರುತ್ತೆ. ಒತ್ತಡದ ಜೀವನಶೈಲಿಯಿಂದಾಗಿ ಅನೇಕ ಮಂದಿಗೆ ಬೆಳಗ್ಗೆ ಉಪಹಾರ ತಯಾರು ಮಾಡೋದೇ ಒಂದು ಕಷ್ಟದ ಕೆಲಸವಾಗಿರುತ್ತೆ. ಹೀಗಾಗಿ ಎಷ್ಟೋ ಮಂದಿ ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣನ್ನ ಸೇವಿಸೋದುಂಟು.
ಬಾಳೆಹಣ್ಣಿನಲ್ಲಿ ಸಾಕಷ್ಟು ಉತ್ತಮ ಪೋಷಕಾಂಶ ಇದೆ ಅನ್ನೋ ವಿಚಾರ ಎಲ್ರಿಗೂ ತಿಳಿದಿರೋದೆ. ಆದರೆ ಈ ಬಾಳೆಹಣ್ಣನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾ ಅನ್ನೋದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೇ ಉಪಯೋಗಕಾರಿಯಾದ ಅಂಶಗಳನ್ನ ಒಳಗೊಂಡಿದೆ. ಇದರಲ್ಲಿರುವ ಫೈಬರ್, ಪೊಟ್ಯಾಷಿಯಂ, ಮ್ಯಾಗ್ನಿಷಿಯಂ ಸೇರಿದಂತೆ ಅನೇಕ ಒಳ್ಳೆಯ ಅಂಶ ಮೂಳೆಗಳ ಶಕ್ತಿಯನ್ನ ಹೆಚ್ಚಿಸೋದ್ರ ಜೊತೆಗೆ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿಯೂ ಬಾಳೆಹಣ್ಣು ಸಹಕಾರಿ.
ಬಾಳೆಹಣ್ಣಿನಲ್ಲಿ ಉತ್ತಮ ಪೋಷಕಾಂಶದ ಜೊತೆಗೆ ನೈಸರ್ಗಿಕ ಸಕ್ಕರೆ ಅಂಶ ಇದೆ. ಇದರಿಂದಾಗಿ ನಿಮ್ಮ ದೇಹಕ್ಕೆ ಎನರ್ಜಿ ಸಿಗೋದ್ರ ಜೊತೆಗೆ ಸಕ್ಕರೆ ಅಂಶ ಕೂಡ ಏರಿಕೆಯಾಗಲಿದೆ, ಹೀಗಾಗಿ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣಿನಿಂದ ದೂರ ಇರೋದು ಒಳಿತು.
ಆದರೆ ಬಾಳೆಹಣ್ಣಿನಿಂದ ದೇಹಕ್ಕೆ ದೊರಕಿದ ಶಕ್ತಿಯು ಕೆಲವೇ ಸಮಯದಲ್ಲಿ ಇಳಿಯೋದ್ರಿಂದ ಆರೋಗ್ಯ ತಜ್ಞರು ಬಾಳೆಹಣ್ಣನ್ನ ಓಟ್ಸ್, ಇತರೆ ಹಣ್ಣು ಹಾಗೂ ಡ್ರೈಫ್ರೂಟ್ಸ್ನೊಂದಿಗೆ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಇನ್ನು ಬಾಳೆಹಣ್ಣಿನಲ್ಲಿ ಮ್ಯಾಗ್ನಿಷಿಯಂ ಅಧಿಕ ಪ್ರಮಾಣದಲ್ಲಿ ಇರೋದ್ರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನ ಸೇವಿಸೋದು ಒಳ್ಳೆಯದಲ್ಲ ಎನ್ನುತ್ತಾರೆ ಆಹಾರ ತಜ್ಞರು. ಇದರಿಂದ ದೇಹದ ಜೀರ್ಣಶಕ್ತಿ ವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ. ಇದು ಮಾತ್ರವಲ್ಲದೇ ದೇಹಕ್ಕೆ ಇದರಿಂದ ಕೆಟ್ಟ ಪರಿಣಾಮ ಕೂಡ ಉಂಟಾಗಬಹುದು.
ಹೀಗಾಗಿ ಬಾಳೆಹಣ್ಣನ್ನ ಓಟ್ಸ್ ಇಲ್ಲವೇ ಇತರೆ ಹಣ್ಣುಗಳ ಜೊತೆಯಲ್ಲಿಯೇ ಸೇವನೆ ಮಾಡಿ.