ಬೇಸಿಗೆ ಶುರುವಾಗ್ತಿದ್ದಂತೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಮನೆ ಹೊರಗೆ, ಮನೆ ಒಳಗೆ ದಾಳಿ ನಡೆಸುವ ಸೊಳ್ಳೆಗಳು ರಾತ್ರಿ ನಿದ್ರೆ ಕೊಡುವುದಿಲ್ಲ. ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯು ನಂತಹ ಅಪಾಯಕಾರಿ ಖಾಯಿಲೆಗಳು ಹರಡುತ್ತವೆ. ಸೊಳ್ಳೆಯನ್ನು ಓಡಿಸಲು ಅನೇಕ ಔಷಧಿಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಉಪಾಯದ ಮೂಲಕ ಮನೆಯನ್ನು ಸೊಳ್ಳೆ ಪ್ರವೇಶ ಮಾಡದಂತೆ ನೋಡಿಕೊಳ್ಳಬಹುದು.
ಸೂರ್ಯನ ಕಿರಣಗಳು ಸೊಳ್ಳೆಯನ್ನು ಸ್ವಲ್ಪ ನಿಯಂತ್ರಣದಲ್ಲಿಡಬಲ್ಲವು. ಆದ್ರೆ ಸೂರ್ಯಾಸ್ತವಾಗ್ತಿದ್ದಂತೆ ಸೊಳ್ಳೆಗಳು ಹೆಚ್ಚು ಸಕ್ರಿಯಗೊಳ್ಳುತ್ತವೆ. ಹಾಗಾಗಿ ಸೂರ್ಯಾಸ್ತದ ವೇಳೆಯಲ್ಲಿ ಸೊಳ್ಳೆಗಳು ಮನೆ ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಮನೆ ಬಾಗಿಲು ಹಾಗೂ ಕಿಟಕಿಯನ್ನು ಮುಚ್ಚಿರಿ. ಹಾಗೆ ನೀವು ಡೋರ್ ಸ್ಟ್ರಿಪ್ಸ್ ಬಳಸಬಹುದು. ಇದು ಕಿಟಕಿಯಿಂದ ಸೊಳ್ಳೆ ಮನೆ ಪ್ರವೇಶ ಮಾಡುವುದನ್ನು ತಡೆಯುತ್ತದೆ.
ಮನೆಯ ಹೊರಗೆ ಹಾಗೂ ಒಳಗಿನ ಸ್ವಚ್ಛತೆ ಕೂಡ ಸೊಳ್ಳೆ ಬರದಂತೆ ತಡೆಯಲು ನೆರವಾಗುತ್ತದೆ. ಮನೆಯ ಒಳಗೆ ಸೊಳ್ಳೆ ಮೊಟ್ಟೆಯಿಡಲು ಹಾಗೂ ಅವಿತು ಕುಳಿತುಕೊಳ್ಳಲು ಜಾಗವಿದ್ದರೆ ಸೊಳ್ಳೆ ಸಂಖ್ಯೆ ಹೆಚ್ಚಾಗುತ್ತದೆ. ಹಳೆ ವಸ್ತುಗಳಿರುವ ಕೋಣೆಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಮನೆ ಹೊರಗೆ ಅಥವಾ ಹೊರಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಾಗೆ ಎಲ್ಲ ಚರಂಡಿ ಮುಚ್ಚಿರಬೇಕು.
ಸೊಳ್ಳೆಯನ್ನು ಓಡಿಸುವ ಸಣ್ಣ ಗಿಡಗಳನ್ನು ಮನೆಯಲ್ಲಿ ಇಡಬಹುದು. ಅವು ಚಿಕ್ಕದಾಗಿರುವ ಕಾರಣ ಮನೆಯೊಳಗೆ ಟೇಬಲ್ ಮೇಲೆಯೂ ಅದನ್ನು ಇಡಬಹುದು. ಇಲ್ಲವೆ ಮನೆ ಬಾಗಿಲ ಬಳಿಯೂ ಇದನ್ನು ಇಡಬಹುದು. ತುಳಸಿ, ಪುದೀನ ಮತ್ತು ಕ್ಯಾಟ್ನಿಪ್ ಸೊಳ್ಳೆ ಓಡಿಸಲು ನೆರವಾಗುತ್ತವೆ.
ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೂ ಸೊಳ್ಳೆ ಓಡಿಸಬಹುದು. ನಿಂಬೆ ಹಾಗೂ ಲವಂಗ ಸೊಳ್ಳೆ ಓಡಿಸಲು ನೆರವಾಗುತ್ತದೆ. ನಿಂಬೆ ಹಣ್ಣನ್ನು ಕತ್ತರಿಸಿ ಅರ್ಥ ಭಾಗ ತೆಗೆದುಕೊಂಡು ನಾಲ್ಕೈದು ಲವಂಗವನ್ನು ಅದಕ್ಕೆ ಚುಚ್ಚಿ ಸೊಳ್ಳೆ ಬರುವ ಜಾಗದಲ್ಲಿ ಇಡಬೇಕು. ಇದ್ರ ವಾಸನೆಗೆ ಸೊಳ್ಳೆ ಓಡಿ ಹೋಗುತ್ತದೆ.
ಬಿಯರ್ ಕೂಡ ಸೊಳ್ಳೆ ಓಡಿಸಲು ನೆರವಾಗುತ್ತದೆ. ಅದನ್ನು ಸೊಳ್ಳೆ ಬರುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಸೊಳ್ಳೆ ಬರುವುದಿಲ್ಲ.