ಮನೆಯಲ್ಲಿ ಮಕ್ಕಳು ಇದ್ದರೆ ಏನಾದರೂ ತಂಟೆ ಮಾಡುತ್ತಿರುತ್ತಾರೆ. ಅದರಲ್ಲೂ ಇವಾಗಷ್ಟೇ ಪೆನ್ಸಿಲ್, ಪೆನ್ನು ಹಿಡಿಯುವುದಕ್ಕೆ ಶುರುಮಾಡಿದ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಗೋಡೆ ಮೇಲೆ ನಾನಾ ರೀತಿಯ ಚಿತ್ತಾರಗಳು ಮೂಡುವುದಕ್ಕೆ ಶುರುವಾಗುತ್ತದೆ.
ನೀವು ಬಾಡಿಗೆ ಮನೆಯಲ್ಲಿದ್ದರೆ ಮಕ್ಕಳು ಈ ರೀತಿಯ ಚಿತ್ರಗಳನ್ನು ಗೋಡೆ ಮೇಲೆ ಬರೆದರೆ ಮನೆ ಮಾಲೀಕರು ಕಿರಿ ಕಿರಿ ಮಾಡುತ್ತಿರುತ್ತಾರೆ. ಇನ್ನು ಮಕ್ಕಳನ್ನು ಕಂಟ್ರೂಲ್ ಮಾಡುವುದಕ್ಕೂ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ.
ಮೊದಲಿಗೆ ಮಕ್ಕಳಿಗೆ ಆದಷ್ಟು ಪೇಪರ್ ಕೊಟ್ಟು ಬರೆಯುವುದಕ್ಕೆ ಹೇಳಿಕೊಡಿ. ಇಲ್ಲದಿದ್ದರೆ ಗೋಡೆಗೆ ಬ್ಲ್ಯಾಕ್ ಬೋರ್ಡ್, ಇಲ್ಲವೇ ಕಪ್ಪು ಬಣ್ಣದ ಚಾರ್ಟ್ ನೇತು ಹಾಕಿ ಅದರಲ್ಲಿ ಬರೆಯುವುದಕ್ಕೆ ಹೇಳಿ.
ಗೋಡೆಗೆ ಅಂಟಿಸುವ ಚಾರ್ಟ್ ಶೀಟ್ ಸಿಗುತ್ತದೆ. ಅದನ್ನು ತಂದು ಅಂಟಿಸುವುದರಿಂದ ಮಕ್ಕಳು ಅದರಲ್ಲಿಯೇ ಬರೆಯುತ್ತಾರೆ.
ಇನ್ನು ಸ್ಕೆಚ್ ಪೆನ್, ಪೆನ್ಸಿಲ್ ನಲ್ಲಿ ಗೋಡೆ ತುಂಬಾ ಬರೆದಿದ್ದರೆ ಒಂದು ಬೌಲ್ ಗೆ 1 ಚಮಚ ಡಿಶ್ ವಾಶ್ ಲಿಕ್ವಿಡ್, 1 ಚಮಚ ಟೂತ್ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬ್ರಷ್ ನ ಸಹಾಯದಿಂದ ಕಲೆಯಾದ ಗೋಡೆಯ ಮೇಲೆ ನಿಧಾನಕ್ಕೆ ತಿಕ್ಕಿ ನಂತರ ಒಂದು ಬಟ್ಟೆಯ ಸಹಾಯದಿಂದ ಒರೆಸಿ ತೆಗೆಯಿರಿ.