ಚಳಿಗಾಲ ಎಂದರೆ ದೇಹ ತೂಕ ಹೆಚ್ಚುವ ಕಾಲ. ಏಕೆನ್ನುತ್ತೀರಾ? ಬೆಳಗಿನ ಚುಮು ಚುಮು ಚಳಿಗೆ ಇನ್ನಷ್ಟು ಹೊತ್ತು ಮೈತುಂಬಾ ಹೊದ್ದು ಮಲಗುವ ಎಂಬ ಭಾವನೆ ಮೂಡುತ್ತದೆಯೇ ಹೊರತು ಬೆಳಗೆದ್ದು ವ್ಯಾಯಾಮ ಮಾಡುವ ಎಂದು ಏಳುವವರು ಯಾರೂ ಇಲ್ಲ.
ಹೌದು. ಬೆಳಗ್ಗೆ ಏಳುವಾಗ ತಡವಾಯಿತೆಂದು ವ್ಯಾಯಾಮದ ಗೋಜಿಗೆ ಹೋಗದೆ ನೇರವಾಗಿ ಕಚೇರಿಗೆ ತೆರಳಿ ಮತ್ತೆ ಕುರ್ಚಿಯಲ್ಲಿ ಆಸೀನರಾದರೆ ಏಳುವುದು ಮಧ್ಯಾಹ್ನದ ಊಟದ ಹೊತ್ತಿಗೇ. ಹೀಗೆ ದೇಹಕ್ಕೆ ವ್ಯಾಯಾಮ ಸಿಗದೆ, ಬೆವರಿಳಿಯದೆ ತಿಂದ ಆಹಾರ ಕೊಬ್ಬಾಗಿ ಪರಿವರ್ತನೆ ಆಗುವುದೇ ಹೆಚ್ಚು.
ಸೂರ್ಯನ ಬಿಸಿಲಿಗೆ ಮೈಯೊಡ್ಡದೆ, ಮನೆಯೊಳಗೇ ಕೂತು ಬೆಚ್ಚಗಿನ ಆಹಾರ ಸೇವಿಸುವಾಗ ಹೆಚ್ಚಿನ ಪ್ರಮಾಣ ಹೊಟ್ಟೆ ಸೇರಿದ್ದು ತಿಳಿಯುವುದೇ ಇಲ್ಲ. ಅದೂ ಎಣ್ಣೆಯಲ್ಲಿ ಕರಿದ ಆಹಾರ ರುಚಿಸುತ್ತದೆಯೇ ಹೊರತು, ಸೊಪ್ಪು ಸಲಾಡ್ ಗಳನ್ನು ಆಯ್ಕೆ ಮಾಡಲು ನಾವು ಹೋಗುವುದೇ ಇಲ್ಲ.
ಚಳಿಗಾಲದಲ್ಲಿ ನೀರು ಕುಡಿಯುವ ಗೋಜಿಗೂ ಹೋಗದೆ ಇರುವುದರಿಂದ ತಿಂದ ಆಹಾರ ಕೊಬ್ಬಾಗಿ ದೇಹದಲ್ಲಿ ಸಂಗ್ರಹವಾಗುತ್ತದೆ. ಚಳಿಗೆ ತಿನ್ನುವ ಬಯಕೆ ಹೆಚ್ಚುವುದು ಸಾಮಾನ್ಯ. ಅದೇ ರೀತಿ ನಿಮ್ಮ ಆಹಾರದ ಮೇಲೆ ನಿಗಾ ವಹಿಸದಿದ್ದಲ್ಲಿ ಚಳಿಗಾಲ ಮುಗಿಯುವ ವೇಳೆ ನೀವು ತೂಕ ಹೆಚ್ಚಿಸಿಕೊಳ್ಳುವುದು ನಿಶ್ಚಿತ.