ಕೋವಿಡ್ 19 ವಿರುದ್ಧದ ಹೋರಾಟ ಇನ್ನೇನು ಕೆಲವೇ ದಿನಗಳಲ್ಲಿ ವರ್ಷ ಪೂರೈಸಲಿದೆ. ಈಗಾಗಲೇ ಅನೇಕ ರಾಷ್ಟ್ರಗಳು ಕೊರೊನಾ ವಿರುದ್ಧದ ಲಸಿಕೆ ಪ್ರಯೋಗದಲ್ಲಿ ನಿರತವಾಗಿದೆ. ಆದರೆ ಈ ಕೊರೊನಾ ಲಸಿಕೆ ಜನ ಸಾಮಾನ್ಯರಿಗೆ ಲಭ್ಯವಾಗೋವರೆಗೆ ಕೊರೊನಾ ಹರಡುವ ಭಯ ಇದ್ದಿದ್ದೇ.
ಹೀಗಾಗಿ ಈ ಸಮಸ್ಯೆಗೆ ಮನೆ ಮದ್ದು ಕೂಡ ಸಹಾಯ ಮಾಡುತ್ತೆ ಅನ್ನೋದನ್ನ ಈಗಾಗಲೇ ಅನೇಕರು ಹೇಳಿದ್ದಾರೆ. ಹಾಗಾದ್ರೆ ಯಾವ ಆಹಾರ ಪದಾರ್ಥ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತೆ ಅನ್ನೋದಕ್ಕೆ ಮಾಹಿತಿ ಇಲ್ಲಿದೆ ನೋಡಿ.
ಅರಿಶಿಣ : ಅರಿಶಿಣದಷ್ಟು ಔಷಧಿ ಗುಣ ಹೊಂದಿರುವ ಇನ್ನೊಂದು ಪದಾರ್ಥ ನಿಮಗೆ ಅಡುಗೆ ಮನೆಯಲ್ಲಿ ಇನ್ನೊಂದು ಸಿಗಲಿಕ್ಕಿಲ್ಲ. ಅರಿಶಿಣದ ಸೇವನೆಯಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗೋದ್ರಿಂದ ವೈರಸ್ನ ವಿರುದ್ಧ ಹೋರಾಡೋದು ದೇಹಕ್ಕೆ ಇನ್ನಷ್ಟು ಸುಲಭವಾಗಲಿದೆ. ಹೀಗಾಗಿ ನಿತ್ಯ ಅರಿಶಿಣ ಹಾಲು ಹಾಗೂ ಅಡುಗೆಯಲ್ಲಿ ಅರಿಶಿಣ ಹಾಕೋದನ್ನ ಮರೆಯದಿರಿ.
ಕಸೂರಿ ಮೇತಿ : ಬಿರಿಯಾನಿ ಅಥವಾ ಪಲಾವ್ ಮಾಡೋವಾಗ ರುಚಿ ಹಾಗೂ ಘಮ ಇನ್ನಷ್ಟು ಹೆಚ್ಚಾಗಬೇಕು ಅಂತಾ ಈ ಪದಾರ್ಥವನ್ನ ಬಳಸಲಾಗುತ್ತೆ. ಆದರೆ ಈ ಕಸೂರಿ ಮೇತಿ ಕೇವಲ ಈ ಕಾರ್ಯಕ್ಕೆ ನೆರವಾಗೋದು ಮಾತ್ರವಲ್ಲದೇ ದೇಹದಲ್ಲಿ ಕೊಬ್ಬಿನ ಅಂಶವನ್ನ ಹಾಗೂ ಉರಿಯೂತವನ್ನ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಜೀರ್ಣ ಕ್ರಿಯೆಯನ್ನ ಸುಧಾರಿಸುವ ಮೂಲಕ ದೇಹದಲ್ಲಿನ ಸಕ್ಕರೆ ಅಂಶವನ್ನ ಸರಿದೂಗಿಸುತ್ತೆ.
ಕೊತ್ತಂಬರಿ ಪುಡಿ : ಕೊತ್ತಂಬರಿ ಕೂಡ ಜೀರ್ಣ ಕ್ರಿಯೆ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಪದಾರ್ಥ. ಹೀಗಾಗಿ ಇದನ್ನ ಹಿಂದಿನ ಕಾಲದಿಂದಲೂ ದಿನನಿತ್ಯದ ಅಡುಗೆಯಲ್ಲಿ ಬಳಕೆಯಲ್ಲಿದೆ. ಶೀತ ಹಾಗೂ ಜ್ವರ ಬಂದಾಗಲೂ ಕೊತ್ತಂಬರಿ ಕಷಾಯ ಮಾಡಿ ಕುಡಿಯೋದ್ರಿಂದ ಆರೋಗ್ಯ ಬೇಗ ಸುಧಾರಿಸುತ್ತೆ.
ಗರಂ ಮಸಾಲಾ : ಎಲ್ಲಾ ರೀತಿಯ ಸಾಂಬಾರ ಪದಾರ್ಥಗಳನ್ನ ಕುಟ್ಟಿ ತಯಾರಿಸುವ ಪುಡಿಯೇ ಗರಂ ಮಸಾಲಾ ಅಂದಮೇಲೆ ಇದರಲ್ಲಿ ದೇಹಕ್ಕೆ ಅನುಕೂಲವಾಗುವ ಅಂಶ ಸಿಕ್ಕಾಪಟ್ಟೆ ಇದೆ ಎಂದಾಯ್ತು. ಗರಂ ಮಸಾಲಾ ನಿಮ್ಮ ಜೀರ್ಣ ಶಕ್ತಿಯನ್ನ ಸುಧಾರಿಸೋದು, ಉರಿಯೂತ ಕಡಿಮೆ ಮಾಡೋದು. ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕಾರ್ಯ ಮಾಡುತ್ತೆ.
ಕಪ್ಪು ಕಾಳು ಮೆಣಸು : ಕಾಳು ಮೆಣಸು ಆಂಟಿ ಆಕ್ಸಿಡೆಂಟ್ ಕೂಡ ಹೌದು. ಇದರ ಜೊತೆಯಲ್ಲಿ ಆಂಟಿ ಬ್ಯಾಕ್ಟಿರಲ್ ಏಜೆಂಟ್ ಕೂಡ ಹೌದು . ವಿಟಮಿನ್ ಸಿ ಅಂಶವನ್ನ ಹೊಂದಿರುವ ಈ ಕಾಳು ಮೆಣಸು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.