ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಳಿದಿರುವ ಮೊಡವೆ ಕಲೆಗಳು ದೂರವಾಗುತ್ತವೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಆದರೆ ಶ್ರೀಗಂಧದ ಎಣ್ಣೆಯೂ ಮುಖದ ಕಾಂತಿ ಹೆಚ್ಚಿಸುತ್ತದೆ ಎಂಬ ವಿಷಯ ನಿಮಗೆ ಗೊತ್ತೇ.
ಶ್ರೀಗಂಧದ ಎಣ್ಣೆ ಮುಖದ ಸುಕ್ಕು ಹಾಗೂ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. ಕಣ್ಣುಗಳ ಕೆಳಗೆ ಮೂಡುವ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ದೂರ ಮಾಡುತ್ತದೆ. ದೇಹಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದು ಹಾಗೂ ನಯವಾಗುತ್ತದೆ.
ಮೊಡವೆ ಮತ್ತು ಕೀವು ಗುಳ್ಳೆಗಳನ್ನು ನಿವಾರಿಸಲು ಶ್ರೀಗಂಧದ ಎಣ್ಣೆಯನ್ನು ಬಳಸಲಾಗುತ್ತದೆ. ಇದಕ್ಕೆ ಮುಲ್ತಾನಿ ಮಿಟ್ಟಿ ಬೆರೆಸಿ ತೆಳುವಾದ ಲೇಪ ತಯಾರಿಸಿ, ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಲೇಪ ಹಚ್ಚಿ. ಹತ್ತು ನಿಮಿಷ ಬಿಟ್ಟು ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
ಕೂದಲನ್ನು ಶ್ರೀಗಂಧದ ಎಣ್ಣೆ ಬೆರೆತ ನೀರಿನಿಂದ ತೊಳೆಯಿರಿ. ಒಂದು ಚೊಂಬು ನೀರಿಗೆ ಕೆಲವು ಹನಿ ಎಣ್ಣೆ ಬೆರೆಸಿ ಸ್ನಾನದ ಕೊನೆಗೆ ಅದನ್ನು ತಲೆಗೆ ಹಾಕಿಕೊಳ್ಳಿ. ಇದರ ಎಣ್ಣೆಯಂಶ ತಲೆಯಲ್ಲೇ ಉಳಿಯಲಿ. ಇದು ನಿಮ್ಮ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ.