ಮಕ್ಕಳನ್ನು ಮುದ್ದಾಗಿ ಬೆಳೆಸುವುದು ಒಳ್ಳೆಯದೇ. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಹೋದಂತೆ ನಿಮಗೆ ಅರಿವಿಲ್ಲದಂತೆ ಮಕ್ಕಳು ತಪ್ಪು ದಾರಿಯಲ್ಲಿ ನಡೆಯಲು ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಲಾಲನೆ ಪಾಲನೆಯ ಮಧ್ಯೆ ಈ ಕೆಲವು ಅಂಶಗಳನ್ನು ಮರೆಯದೆ ಪಾಲಿಸಬೇಕು.
ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವ ಪರಿಪಾಠ ನಿಲ್ಲಬೇಕು. ಮನೆಮಂದಿ ಒಟ್ಟಾಗಿ ಕೂತು ಊಟ ಮಾಡುವುದರಿಂದ ಮಕ್ಕಳ ನಡುವೆ ಒಂದು ಭಾವನಾತ್ಮಕ ಬಂಧ ಬೆಳೆಯುತ್ತದೆ. ಕುಟುಂಬದವರೊಂದಿಗೆ ಜೊತೆಯಾಗಿ ಬಾಳಬೇಕು ಎಂಬ ಯೋಚನೆಯೂ ತಲೆಯೊಳಗೆ ಉಳಿಯುತ್ತದೆ.
ಪ್ರತಿ ಬಾರಿ, ಅಲ್ಲಿ ಹೋಗದಿರು, ಇಲ್ಲಿ ಹೋಗದಿರು ಎಂದು ತಡೆ ಗೋಡೆ ಹಾಕದಿರಿ. ಮಕ್ಕಳನ್ನು ಹೊರಾಂಗಣ ಆಟಕ್ಕೆ ಕರೆದೊಯ್ಯಿರಿ. ಮಕ್ಕಳು ಆಡುವಾಗ ಬೀಳುವುದು, ಕಾಲು ನೋವು ಮಾಡಿಕೊಳ್ಳುವುದು ಸಹಜ. ಆ ಕಾರಣಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಆಡಲು ಬಿಡಿ.
ಸೋತಾಗ ಬುದ್ದಿ ಹೇಳಿ. ಪ್ರತಿ ಸ್ಪರ್ಧೆಯಲ್ಲೂ ನೀನೇ ವಿಜಯಿಯಾಗಬೇಕು ಎಂದುಕೊಳ್ಳಬೇಡ, ಇತರರಿಗೂ ಜಯ ಸಿಗಲಿ ಎಂಬುದನ್ನು ಮಕ್ಕಳಿಗೆ ಅರ್ಥವಾಗುವಂತೆ ಹೇಳಿ. ನೀತಿ ಕತೆಗಳ ಮೂಲಕ ಮಕ್ಕಳಿಗೆ ಮಾಹಿತಿಯ ಮನವರಿಕೆ ಮಾಡಿಕೊಡಿ.