ಸಂಜೆಯ ಸ್ನ್ಯಾಕ್ಸ್ ಏನಾದರೂ ಡಿಫರೆಂಟ್ ಆಗಿರುವುದು ತಿನ್ನಬೇಕು ಅನಿಸಿದರೆ ಒಮ್ಮೆ ಮಾಡಿ ನೋಡಿ ಈ ಮೊಟ್ಟೆ ಪರೋಟಾ. ತಿನ್ನಲು ಸಖತ್ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಗೋಧಿ ಹಿಟ್ಟು, ನೀರು – ಅಗತ್ಯವಿರುವಷ್ಟು, 1 ಟೀ ಸ್ಪೂನ್ ಎಣ್ಣೆ, 2 – ಮೊಟ್ಟೆ, 1 – ಈರುಳ್ಳಿ, 1 – ಹಸಿಮೆಣಸು, ಚಿಟಿಕೆ ಕಾಳುಮೆಣಸಿನ ಪುಡಿ, ಚಿಟಿಕೆ – ಅರಿಶಿನ ಪುಡಿ, ಉಪ್ಪು – ರುಚಿಗೆ ತಕ್ಕಷ್ಟು, 1 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು.
ಮಾಡುವ ವಿಧಾನ:
ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿಕೊಂಡು ಚೆನ್ನಾಗಿ ನಾದಿಕೊಳ್ಳಿ. ಚಪಾತಿ ಹದಕ್ಕೆ ಇದ್ದರೆ ಸಾಕು. ನಂತರ ಇದಕ್ಕೆ ಒಂದು ಪ್ಲೇಟ್ ಮುಚ್ಚಿ 20 ನಿಮಿಷಗಳ ಕಾಲ ಇಟ್ಟುಬಿಡಿ. ನಂತರ ಒಂದು ಬೌಲ್ ಗೆ ಮೊಟ್ಟೆ ಒಡೆದು ಹಾಕಿಕೊಂಡು ಅದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಅರಿಶಿನ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಹಿಟ್ಟಿನ ಮಿಶ್ರಣದಿಂದ ಪರೋಟಾ ತಯಾರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದರಲ್ಲಿ ಮಾಡಿಟ್ಟುಕೊಂಡ ಪರೋಟಾ ಹಾಕಿ ಬೇಯಿಸಿಕೊಳ್ಳಿ. ಇದು ಅರ್ಧ ಬೆಂದರೆ ಸಾಕು ಆಮೇಲೆ ಒಂದು ಪ್ಲೇಟ್ ತೆಗೆದುಕೊಳ್ಳಿ. ನಂತರ ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಮೊಟ್ಟೆಯ ಮಿಶ್ರಣ ಹಾಕಿ. ಇದು ತುಸು ಬೆಂದು ಬರುತ್ತಿದ್ದಂತೆ ಇದರ ಮೇಲೆ ಪರೋಟಾ ಇಟ್ಟು 1 ನಿಮಿಷದ ಬಳಿಕ ಇದನ್ನು ತಿರುವಿ ಹಾಕಿ. ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ಚಟ್ನಿ ಜತೆ ಸರ್ವ್ ಮಾಡಿ. ಮಕ್ಕಳಿಗೆ ಬೇಕಾದರೆ ರೋಲ್ ಮಾಡಿ ಕೊಡಬಹುದು.