ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ ಪೂಜೆ ಮಾಡಿರುವುದಾಗಿ ಹೇಳಲಾಗುತ್ತದೆ.
ಪಾಂಡವರು ಹದಿನಾಲ್ಕು ವರ್ಷ ವನವಾಸದ ನಂತರ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದು ಪೂಜಿಸಿದರು ಎಂಬ ಐತಿಹ್ಯ ಇದೆ. ಅದೇ ರೀತಿ ಮೈಸೂರು ಅರಸರ ಕಾಲದಲ್ಲಿಯೂ ಆಯುಧ ಪೂಜೆ ನಡೆದುಕೊಂಡು ಬಂದಿದೆ.
ಹೀಗೆ ಆಯುಧ ಪೂಜೆಯಂದು ಮನೆಗಳಲ್ಲಿ, ಅಂಗಡಿಗಳಲ್ಲಿ ಆಯುಧ, ಕೆಲಸದ ಪರಿಕರಗಳನ್ನು ಸ್ವಚ್ಛಗೊಳಿಸಿ ಹೂವು ಬಾಳೆಕಂದುಗಳಿಂದ ಶೃಂಗರಿಸುತ್ತಾರೆ. ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಒಳಿತಾಗಲಿ ಎಂದು ಪ್ರಾರ್ಥಿಸುತ್ತಾರೆ.
ಗ್ರಾಮೀಣ ಪ್ರದೇಶದಲ್ಲಂತೂ ಆಯುಧ ಪೂಜೆ ವಿಶೇಷವಾಗಿರುತ್ತದೆ. ರೈತರು ತಮ್ಮ ಗಾಡಿ ಹಾಗೂ ಕೃಷಿ ಪರಿಕರ ಸಾಮಗ್ರಿಗಳನ್ನು ಪೂಜಿಸಿದರೆ, ಗಾರೆ ಕೆಲಸದವರು, ಗ್ಯಾರೇಜ್ ಗಳಲ್ಲೂ ಪರಿಕರ ಹಾಗೂ ಸಲಕರಣೆಗಳಿಗೆ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಮಾರನೇ ದಿನವೇ ವಿಜಯದಶಮಿ ಹಬ್ಬದ ಸಂಭ್ರಮ ಆರಂಭವಾಗುತ್ತದೆ.