ಕಾಕಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಹಣ್ಣನ್ನು ಸೇವಿಸುವುದರಿಂದ ಬಾಯಲ್ಲಿರುವ ಹುಣ್ಣು ನಿವಾರಣೆಯಾಗುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಸಾರು ಕೂಡ ಮಾಡಬಹುದು.
100 ಗ್ರಾಂ ಮಸೂರ್ ದಾಲ್ ಅನ್ನು ಚೆನ್ನಾಗಿ ತೊಳೆದು 300 ಎಂ.ಎಲ್. ನೀರು ಹಾಕಿ ಅರಿಶಿನಪುಡಿ ಸೇರಿಸಿ ಬೇಯಿಸಿ. ನಂತರ ಇದಕ್ಕೆ ಒಂದು ಕಟ್ಟು ಕಾಕಿ ಸೊಪ್ಪು, 3 ಬೆಳ್ಳುಳ್ಳಿ, ಚಿಟಿಕೆ ಇಂಗು, ½ ಟೀ ಸ್ಪೂನ್ ಉಪ್ಪು, ಅರ್ಧ ಗ್ಲಾಸ್ ನೀರು ಹಾಕಿ 1 ವಿಷಲ್ ಕೂಗಿಸಿಕೊಂಡು ಕುಕ್ಕರ್ ಆಫ್ ಮಾಡಿ.
ನಂತರ ಇದನ್ನು ಚೆನ್ನಾಗಿ ಮಸೆಯಿರಿ. ನಂತರ 12 ಸಣ್ಣ ಈರುಳ್ಳಿ, 3 ಹಸಿಮೆಣಸು, 2 ಟೊಮೆಟೊವನ್ನು ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಹಸಿಮೆಣಸು, ಈರುಳ್ಳಿ, ಟೊಮೆಟೊ ಹಾಕಿ. ಟೊಮೆಟೊ ಚೆನ್ನಾಗಿ ಬೇಯಲಿ.
ನಂತರ 3 ಟೇಬಲ್ ಸ್ಪೂನ್ ಹುಣಸೆಹಣ್ಣಿನ ರಸ ಸೇರಿಸಿ ಹಸಿವಾಸನೆ ಹೋಗುವವರೆಗೆ ಕುದಿಸಿ. ನಂತರ ಸೊಪ್ಪು ಬೇಳೆ ಮಿಶ್ರಣ ಸೇರಿಸಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ ಆಮೇಲೆ ಉಪ್ಪು ಸೇರಿಸಿ ಕುದಿಸಿ. ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ, ಕರಿಬೇವು, ಉದ್ದೀನ ಬೇಳೆ ಹಾಕಿ ಒಗ್ಗರಣೆ ರೆಡಿ ಮಾಡಿ ಅದನ್ನು ಈ ಮಿಶ್ರಣಕ್ಕೆ ಹಾಕಿದರೆ ಬಿಸಿ ಅನ್ನದ ಜತೆ ತಿನ್ನಲು ಚೆನ್ನಾಗಿರುತ್ತದೆ.