ಕಚೋರಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ತಿನಿಸುಗಳೆಂದರೆ ಬಹುತೇಕರಿಗೆ ಇಷ್ಟ. ಇಂತಹ ಕ್ಯಾಪ್ಸಿಕಂ ಕಚೋರಿ ತಯಾರಿಸುವ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ಮೈದಾ-250 ಗ್ರಾಂ, ಸಣ್ಣ ಕ್ಯಾಪ್ಸಿಕಂ-5- 6, ಅಗತ್ಯಕ್ಕೆ ತಕ್ಕಂತೆ ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊತಂಬರಿ ಸೊಪ್ಪು, ಪುದೀನಾ, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಜೀರಿಗೆ, ಸೋಂಪಿನ ಪುಡಿ, ಗರಂ ಮಸಾಲ, ಅರ್ಧ ಸೌಟು ತುಪ್ಪ, ಕರಿಯಲು ಎಣ್ಣೆ
ತಯಾರಿಸುವ ವಿಧಾನ : ಮೊದಲಿಗೆ ಜರಡಿಯಾಡಿದ ಮೈದಾಗೆ ಉಪ್ಪು, ನೀರನ್ನು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲೆಸಿರಿ. ಇದಕ್ಕೆ ಅರ್ಧದಷ್ಟು ತುಪ್ಪವನ್ನು ಬೆರೆಸಿರಿ, ನಾದಿಕೊಂಡು, 2 ಗಂಟೆ ನೆನೆಯಲು ಬಿಡಿ. ಚಿಕ್ಕ ಬಾಣಲೆಯಲ್ಲಿ 4 ಚಮಚ ತುಪ್ಪ ಬಿಸಿ ಮಾಡಿಕೊಂಡು ಒಗ್ಗರಣೆ ಹಾಕಿ. ನಂತರ ಹಸಿಮೆಣಸು, ಶುಂಠಿಯನ್ನು ಹಾಕಿ ಬಾಡಿಸಿರಿ.
ನಂತರ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ತೆಂಗಿನ ತುರಿಯನ್ನು ಹಾಕಿ ಕಲೆಸಿ. ನಂತರ ಉಪ್ಪು, ಖಾರ, ಮಸಾಲೆ ಎಲ್ಲವನ್ನು ಸೇರಿಸಿ ಚೆನ್ನಾಗಿ ಬೆರೆಸಿರಿ. ಆರಲು ಬಿಟ್ಟು, ಸಿದ್ಧವಾದ ಹೂರಣವನ್ನು ನೆನೆದ ಮೈದಾ ಹಿಟ್ಟಿಗೆ ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ನಾದಬೇಕು.
ಇದರಿಂದ ಸಣ್ಣ ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿಕೊಂಡು, ಮಧ್ಯದಲ್ಲಿ 3-4 ಚಮಚ ಹೂರಣ ತುಂಬಿಸಿ, ಮುಚ್ಚಿರಿ ನಂತರ ಎಣ್ಣೆಯಲ್ಲಿ ಕರಿಯಿರಿ. ಸವಿಯಲು ಕ್ಯಾಪ್ಸಿಕಂ ಕಚೋರಿ ಸಿದ್ಧವಾಗಿರುತ್ತದೆ.