ಇಂಗು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಔಷಧ ತಯಾರಿಕೆಯಲ್ಲೂ ಅದನ್ನು ಹೇರಳವಾಗಿ ಬಳಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆ ನೋವು ಬಂದಾಕ್ಷಣ ಮಜ್ಜಿಗೆಗೆ ಇಂಗು ಬೆರೆಸಿ ಕುಡಿಯುವ ಕ್ರಮ ಇಂದಿಗೂ ಇದೆ.
ಬೇಸಿಗೆಯಲ್ಲಿ ದಾಹ ದಮನಕ್ಕಾಗಿ ಕುಡಿಯುವ ಮಜ್ಜಿಗೆ ನೀರಿಗೆ ಉಪ್ಪಿನೊಂದಿಗೆ ತುಸು ಇಂಗು ಬೆರೆಸಿದರೆ ಶೀತವಾಗುವುದಿಲ್ಲ. ದಾಹವೂ ಕಡಿಮೆಯಾಗುತ್ತದೆ.
ಸೂಕ್ಷ್ಮ ಜೀವಿ ವಿರೋಧಿಯಾದ ಇದನ್ನು ಮಕ್ಕಳ ಕೊಠಡಿಯಲ್ಲಿಟ್ಟರೆ ಶೀತ ಜ್ವರದಂಥ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ವಾಯು ಸಂಬಂಧಿ ರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಹಾಗಾಗಿಯೇ ಇಂಗು, ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆ ಜಾರಿಗೆ ಬಂದಿತ್ತೇನೋ…!