ಒಂದೊಮ್ಮೆ ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡು, ಶಿಲ್ಪಕಲೆಯ ನೆಲೆವೀಡು ಎಂದೇ ಪ್ರಸಿದ್ಧಿ ಪಡೆದಿದೆ. ಹೊಯ್ಸಳರು ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ಜನಪದವಾಗಿ ಹಳೆಯ ಬೀಡು (ಊರು) ಎಂಬ ಹೆಸರೇ ಬಂತು.
ಇಲ್ಲಿನ ಮೊದಲ ಹೆಸರು ದೋರಸಮುದ್ರ. ಕ್ರಿ.ಶ.950ರ ಸುಮಾರಿನಲ್ಲಿ ರಾಷ್ಟ್ರಕೂಟರ ದೊರೆ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇಲ್ಲಿಗೆ ದೋರಸಮುದ್ರ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಇಲ್ಲಿನ ಶಿಲ್ಪಕಲೆಗಳು ನಿತ್ಯನೂತನ. ಇಲ್ಲಿ ಹಲವಾರು ಸುಂದರ ದೇವಾಲಯಗಳಿದ್ದವು. ಅಲ್ಲಾವುದ್ದೀನ್ ನ ದಂಡನಾಯಕ ಮಲ್ಲಿ ಕಾಫರ್ ಸೇರಿದಂತೆ ಹಲವು ದಾಳಿಯ ಬಳಿಕ ಈಗ ಉಳಿದಿರುವುದು ಹೊಯ್ಸಳೇಶ್ವರ ದೇವಸ್ಥಾನ ಮಾತ್ರ.
ಇದರ ನಿರ್ಮಾಣ ಆರಂಭಗೊಂಡಿದ್ದು ವಿಷ್ಣುವರ್ಧನನ ಅಂತ್ಯಕಾಲದಲ್ಲಿ. ಅತನ ಮಗ ನರಸಿಂಹನ ಆಸಕ್ತಿಯಿಂದಾಗಿ ಮಹೋನ್ನತ ಕಲೆಯೊಂದು ರೂಪು ತಳೆಯಿತು.
ಮೂಲ ಸ್ವರೂಪ ನಿರ್ಮಾಣಕ್ಕೆ 40 ವರ್ಷ, ಶಿಲ್ಪಕಲಾ ಕೆತ್ತನೆಯ ಕುಸುರಿ ಕೆಲಸ ಮುಗಿಸಲು 120 ವರ್ಷ ಬೇಕಾಯಿತು. ಬೆಂಗಳೂರಿನಿಂದ 225 ಕಿ.ಮೀ.ದೂರದಲ್ಲಿ, ತಾಲೂಕು ಕೇಂದ್ರ ಬೇಲೂರಿನಿಂದ 16 ಕಿ.ಮೀ. ದೂರದಲ್ಲಿದೆ. ರಾಜ್ಯದ ಎಲ್ಲೆಡೆಗಳಿಂದ ಬಸ್ ಸೌಲಭ್ಯ ಇದೆ.