ಸಂಜೆ ವೇಳೆಗೆ ಸ್ನ್ಯಾಕ್ಸ್ ಏನಾದರೂ ಬಾಯಾಡಿಸುವುದಕ್ಕೆ ಇದ್ದರೆ ಬಹಳ ಖುಷಿಯಾಗುತ್ತದೆ. ಟೀ ಕುಡಿಯುತ್ತ ಇದನ್ನು ಸವಿಯುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ.
ಟೀ ಜತೆ ಸಖತ್ ಆಗಿ ಕಾಂಬಿನೇಷನ್ ಆಗುವ ರಾಗಿ ಚಕ್ಕುಲಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 250 ಗ್ರಾಂ-ರಾಗಿ ಹಿಟ್ಟು, 150 ಗ್ರಾಂ ಕಡಲೇಹಿಟ್ಟು, 5 ಗ್ರಾಂ ಶುಂಠಿ ಪೇಸ್ಟ್, 5 ಗ್ರಾಂ ಖಾರದಪುಡಿ, 2 ಗ್ರಾಂ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲಿಗೆ ಒಂದು ಅಗಲವಾದ ಪಾತ್ರೆಗೆ ರಾಗಿಹಿಟ್ಟು, ಕಡಲೇ ಹಿಟ್ಟು, ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಶುಂಠಿ ಪೇಸ್ಟ್, ಉಪ್ಪು, ತುಸು ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಷ್ಟು ನೀರು ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಎಣ್ಣೆ ಕಾಯಲು ಇಟ್ಟು ಚಕ್ಕುಲಿ ಅಚ್ಚಿಗೆ ಈ ಹಿಟ್ಟನ್ನು ಹಾಕಿಕೊಂಡು ಚಕ್ಕುಲಿ ಮಾಡಿ. ಗ್ಯಾಸ್ ಉರಿ ಹದವಾಗಿರಲಿ. ಗರಿಗರಿಯಾಗಿ ಕರಿದು ಗಾಳಿಯಾಡದ ಡಬ್ಬದಲ್ಲಿ ಇದನ್ನು ತುಂಬಿಸಿಡಿ.