ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಆರೋಗ್ಯಕರವಾದ ಬಿಟ್ರೂಟ್ ಹಾಗೂ ಗ್ರೀನ್ ಆ್ಯಪಲ್ ಸೂಪ್ ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ. ಬಿಟ್ರೂಟ್ ಸೂಪ್ ಕುಡಿಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ರಕ್ತವು ಶುದ್ಧವಾಗುತ್ತದೆ. ಜತೆಗೆ ಕೂದಲಿನ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು: 4 ಮಧ್ಯಮ ಗಾತ್ರದ ಬಿಟ್ರೂಟ್, 1 ½ ಗ್ರೀನ್ ಆ್ಯಪಲ್, 1 ಮಧ್ಯಮ ಗಾತ್ರದ ಈರುಳ್ಳಿ, 1 ಟೇಬಲ್ ಸ್ಪೂನ್-ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, 4 ಕಾಳು ಕಾಳು ಮೆಣಸು, ½ ಟೇಬಲ್ ಸ್ಪೂನ್ ಬೆಣ್ಣೆ, 2 ಕಪ್ –ವೆಜಿಟೇಬಲ್ ಸ್ಟಾಕ್, ¼ ಕಪ್ ಫ್ರೇಶ್ ಕ್ರೀಂ, 1 ಟೇಬಲ್ ಸ್ಪೂನ್ ಲಿಂಬೆ ಹಣ್ಣಿನ ರಸ,
ಮೊದಲಿಗೆ ಈರುಳ್ಳಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿಕೊಳ್ಳಿ. ಅದಕ್ಕೆ ಈರುಳ್ಳಿ ಹಾಕಿ 2 ನಿಮಿಷ ಕೈಯಾಡಿಸಿ. ನಂತರ ಕತ್ತರಿಸಿಟ್ಟುಕೊಂಡ ಬಿಟ್ರೂಟ್ ಹಾಕಿ. ಇದು ಬೆಂದ ನಂತರ ಗ್ರೀನ್ ಆ್ಯಪಲ್ ಅನ್ನು ಕತ್ತರಿಸಿಕೊಂಡು ಹಾಕಿ. ಉಪ್ಪು, ಕಾಳು ಮೆಣಸು, ಬೆಣ್ಣೆ ಹಾಕಿ ಚೆನ್ನಾಗಿ ಕೈಯಾಡಿಸಿ.
ನಂತರ ಇದಕ್ಕೆ ವೆಜಿಟೇಬಲ್ ಸ್ಟಾಕ್ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ. ನಂತರ ಕ್ರೀಂ ಅನ್ನು ಸೇರಿಸಿ ಮಿಕ್ಸಿಯಲ್ಲಿ ಈ ಮಿಶ್ರಣವನ್ನೆಲ್ಲಾ ಸೇರಿಸಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಲೆಮನ್ ಜ್ಯೂಸ್ ಸೇರಿಸಿದರೆ ರುಚಿಕರವಾದ ಆರೋಗ್ಯಕರವಾದ ಬಿಟ್ರೂಟ್ ಸೂಪ್ ರೆಡಿ.