ಮೂಲಂಗಿ ಒಂದು ಆರೋಗ್ಯದಾಯಕ ತರಕಾರಿ ಹಾಗೂ ಅನೇಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಆದರೆ ಕೆಲವರಿಗೆ ಮೂಲಂಗಿ ಅಂದರೆ ಅಸಡ್ಡೆ.
ಆದರೂ ಆಗಾಗ ಈ ತರಕಾರಿಯನ್ನು ಸೇವಿಸುತ್ತಿದ್ದಲ್ಲಿ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಹಾಗೂ ಇನ್ನಿತರ ಆರೋಗ್ಯ ಲಾಭಗಳನ್ನು ಪಡೆಯಬಹುದು.
* ಮೂಲಂಗಿ ಗಡ್ಡೆಯ ರಸವನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿದರೆ ಅಜೀರ್ಣದಿಂದ ಉಂಟಾದ ಅತಿಸಾರ ಗುಣವಾಗುತ್ತದೆ.
* ತರಕಾರಿಯಾಗಿ ಇದನ್ನು ತಿಂದಾಗ ಜೀರ್ಣಶಕ್ತಿ ಹೆಚ್ಚಾಗಿ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.
* ಮೂಲಂಗಿಯನ್ನು ಹಸಿಯಾಗಿ ತಿಂದಾಗ ಒಳ್ಳೆಯ ಜೀರ್ಣದಾಯಕವಾಗುತ್ತದೆ. ಇದರ ಸೊಪ್ಪನ್ನು ಸಹ ತರಕಾರಿ ರೂಪದಲ್ಲಿ ಉಪಯೋಗ ಮಾಡಿದರೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ.
* ಮೂಲಂಗಿಯನ್ನು ಯಾವಾಗಲೂ ಎಳೆಯದಾಗಿರುವಾಗಲೇ ತಿನ್ನಬೇಕು. ಬಲಿತ ಮೂಲಂಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
* ಮೂಲಂಗಿಯನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಒಣಗಿಸಿ ಇಟ್ಟುಕೊಳ್ಳಬೇಕು. ಹೀಗೆ ಒಣಗಿದ ಚೂರುಗಳನ್ನು ಪೊಟಲಿಯಲ್ಲಿ ಕಟ್ಟಿ ಬಿಸಿಮಾಡಿ ಶಾಖ ಕೊಟ್ಟರೆ ಕೀಲು ನೋವು ಕಡಿಮೆಯಾಗುತ್ತದೆ.
* ಮೂಲಂಗಿ ಸೊಪ್ಪಿನ ರಸಕ್ಕೆ 2-3 ಚಮಚ ಜೇನುತುಪ್ಪವನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕಾಮಾಲೆ ರೋಗ ಬೇಗನೆ ಗುಣವಾಗುತ್ತದೆ.
* ಮೂಲಂಗಿ ಸೊಪ್ಪಿನ ರಸಕ್ಕೆ ಕೊಂಚ ಬಿಳಿ ಮೆಣಸಿನಪುಡಿ ಹಾಗೂ ಜೇನನ್ನು ಸೇರಿಸಿ ತೆಗೆದುಕೊಂಡರೆ ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತದೆ.