ಲಾಡು ಎಲ್ಲಾ ಸ್ಪೆಷಲ್ ಸಮಾರಂಭಗಳಿಗೂ ಹೊಂದಿಕೆಯಾಗುವಂಥಹ ಸಿಹಿ ತಿನಿಸು. ಭಾರತದಲ್ಲಿ ಲಾಡು ಬಲು ಫೇಮಸ್. ಈ ಹೆಸರು ಬೇಳೆಯಿಂದ ಮಾಡಿರೋ ಲಾಡು ನಿಜಕ್ಕೂ ಬಲು ರುಚಿಕರವಾಗಿರುತ್ತದೆ. ಹೆಸರು ಕೇಳಿದ್ರೇನೇ ಬಾಯಲ್ಲಿ ನೀರೂರುವ ಈ ಲಾಡುವನ್ನು ಹೇಗೆ ಮಾಡೋದು ನೋಡೋಣ.
ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು ಬೇಳೆ, ಕಾಲು ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ, 3 ಏಲಕ್ಕಿ, ಹೆಚ್ಚಿದ ಗೋಡಂಬಿ, ಬಾದಾಮಿ ಮತ್ತು ಪಿಸ್ತಾ.
ಮಾಡುವ ವಿಧಾನ: ಒಂದು ಬಾಣೆಲೆಯಲ್ಲಿ ಹೆಸರು ಬೇಳೆಯನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಅದು ತಣ್ಣಗಾದ ಬಳಿಕ ನುಣ್ಣಗೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಅದನ್ನು ಬಾಣೆಲೆಗೆ ಹಾಕಿ, ಅದಕ್ಕೆ ಕಾಲು ಕಪ್ ತುಪ್ಪ ಬೆರೆಸಿಕೊಳ್ಳಿ. ಸಣ್ಣ ಉರಿಯಲ್ಲಿ ಹುರಿಯಿರಿ. ಸೌಟಿನಿಂದ ತೊಳಸುತ್ತಲೇ ಇರಿ . ಮಿಶ್ರಣ ಸಂಪೂರ್ಣ ಹೊಂಬಣ್ಣಕ್ಕೆ ಬಂದ ಬಳಿಕ ಗ್ಯಾಸ್ ಆಫ್ ಮಾಡಿ, ಮಿಶ್ರಣವನ್ನು ಬೇರೊಂದು ಪಾತ್ರೆಗೆ ಹಾಕಿ.
ಅರ್ಧ ಕಪ್ ಸಕ್ಕರೆಯನ್ನು ಪುಡಿ ಮಾಡಿಕೊಂಡು ಸ್ವಲ್ಪ ತಣ್ಣಗಾಗಿರುವ ಮಿಶ್ರಣಕ್ಕೆ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಏಲಕ್ಕಿ ಪುಡಿಯನ್ನೂ ಸೇರಿಸಿಕೊಳ್ಳಿ. ಮಿಶ್ರಣವನ್ನು ಚಿಕ್ಕ ಚಿಕ್ಕ ಲಾಡುಗಳನ್ನಾಗಿ ಮಾಡಿ. ಅದಕ್ಕೆ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿದರೆ ಹೆಸರು ಬೇಳೆ ಲಾಡು ಸಿದ್ಧ.