ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆರೋಗ್ಯವಂತ ಮನುಷ್ಯ ಖುಷಿ ಖುಷಿಯಾಗಿ ಕೆಲಸ ಮಾಡ್ತಾನೆ. ಈ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ತಿನ್ನೋದು ಮುಖ್ಯ. ಆದರೆ ಸಮಯವಲ್ಲದ ಸಮಯದಲ್ಲಿ ಆಹಾರ ಸೇವಿಸಿದರೆ ಅದು ತುಂಬಾ ಅಪಾಯಕಾರಿ.
ತುಂಬಾ ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಬೇಕಾಬಿಟ್ಟಿ ಆಹಾರ ಸೇವಿಸುವುದಲ್ಲ. ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರ ಸೇವಿಸಿದರೆ ತೊಂದರೆ ನಿಶ್ಚಿತ.
ಖಾಲಿ ಹೊಟ್ಟೆಯಲ್ಲಿ ಸೋಡಾ ಸೇವಿಸಬಾರದು. ಅದರಲ್ಲಿ ಕಾರ್ಬೋನೇಟ್ ಆಮ್ಲ ಜಾಸ್ತಿ ಇರುತ್ತದೆ. ಟೊಮೆಟೋದಲ್ಲಿಯೂ ಆಮ್ಲದ ಅಂಶ ಜಾಸ್ತಿ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ.
ಔಷಧಿಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳದಂತೆ ವೈದ್ಯರು ಸಲಹೆ ನೀಡುತ್ತಾರೆ. ಔಷಧಿಯನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲದ ಅಂಶ ಹೆಚ್ಚಾಗಿ, ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ಕಾಫಿ ಸೇವನೆ ಕೂಡ ಒಳ್ಳೆಯದಲ್ಲ. ಅದರಲ್ಲಿ ಕೆಫೆನ್ ಜಾಸ್ತಿ ಇರುತ್ತದೆ. ಕಾಫಿಗಿಂತ ಒಂದು ಲೋಟ ನೀರು ಕುಡಿಯುವುದು ಉತ್ತಮ. ಹಾಗೇ ಟೀ ಯಿಂದಲೂ ದೂರ ಇರಿ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಹೊಟ್ಟೆ ನೋವು ಬರುತ್ತದೆ. ಮೊಸರು ಹಾಗೂ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇವೆರಡೂ ಉತ್ತಮ ಆರೋಗ್ಯಕ್ಕೆ ಬೇಕು. ಹಾಗಂತ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಪಾಯ.