ಹೆಂಗಳೆಯರಿಗೆ ಸೀರೆ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹಬ್ಬ, ಮದುವೆ, ಮುಂಜಿ, ಪಾರ್ಟಿ ಹೀಗೆ ನಾನಾ ಕಾರಣಗಳಿಗೆ ಸೀರೆ ಕೊಳ್ಳುತ್ತಲೇ ಇರುತ್ತಾರೆ. ಆದರೇ ಹೀಗೆ ಸೀರೆ ಕೊಳ್ಳುವಾಗ ಸಂದರ್ಭಕ್ಕೆ ತಕ್ಕನಾದ ಸೀರೆ ಕೊಳ್ಳುವ ಯೋಚನೆ ಮಾಡಬೇಕು. ಇದರಿಂದ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಮತ್ತು ಫ್ಯಾಶನೇಬಲ್ ಆಗಿಯೂ ಕಾಣಿಸಿಕೊಳ್ಳಬಹುದು.
ಬೇಸಿಗೆಯಲ್ಲಿ ಮಂದವಾದ ಬಣ್ಣದ ಸೀರೆಗಳನ್ನು ಕೊಳ್ಳಬೇಕು. ಮಂದ ಬಣ್ಣಗಳು ಸೂರ್ಯನ ಕಿರಣಗಳನ್ನು ಹೀರದೇ ಇರೋದರಿಂದ ಸೆಕೆಯಾಗುವುದನ್ನು ತಪ್ಪಿಸಿಕೊಳ್ಳಬಹುದು. ಮಳೆ ಮತ್ತು ಚಳಿಗಾಲದಲ್ಲಿ ಕೆಂಪು, ಕಪ್ಪು, ನೇರಳೆಯಂತಹ ಗಾಢ ಬಣ್ಣದ ಸೀರೆಗಳನ್ನು ಆಯ್ದುಕೊಳ್ಳಬಹುದು. ಯಾವುದೇ ಸಂದರ್ಭದಲ್ಲಾದರೂ ತಮ್ಮ ಶರೀರದ ಬಣ್ಣವನ್ನು ಗಮನಿಸಿ ಸೀರೆಗಳನ್ನು ಆಯ್ಕೆಮಾಡಿಕೊಳ್ಳಬೇಕು.
ಕಪ್ಪು ವರ್ಣದವರು ಬಾದಾಮಿ, ತಿಳಿ ನೀಲಿ, ನಸು ಹಸಿರು, ನಸು ಗುಲಾಬಿ, ಗುಲಾಬಿ ಆನಂದ, ನಸು ಮೆಂಜತಾ, ಕನಕಾಂಬರ, ನಸು ಹಳದಿ ಮತ್ತು ಬಿಳಿಯ ಬಣ್ಣದ ಹಾಗೂ ಚಿಕ್ಕ-ಚಿಕ್ಕ ಹೂಗಳಿರುವ ಸೀರೆ ಆಯ್ದುಕೊಳ್ಳುವುದು ಉತ್ತಮ.
ಎಣ್ಣೆಗಪ್ಪು ಅಥವಾ ಕಪ್ಪು ಮಿಶ್ರಿತ ಕೆಂಪು ಬಣ್ಣದವರು ಬೂದು ಬಣ್ಣ, ಕೋಕೋ ಬಣ್ಣ, ಆಕಾಶ ನೀಲಿ, ಈರುಳ್ಳಿ ಬಣ್ಣದ ಸೀರೆಗಳನ್ನು ಬಳಸಬಹುದು. ಈ ಬಣ್ಣದವರಿಗೆ ಈ ಮೇಲಿನ ಬಣ್ಣಗಳಲ್ಲಿ ದೊಡ್ಡ-ದೊಡ್ಡ ಹೂಗಳಿರುವ ಸೀರೆಯೂ ಒಪ್ಪುತ್ತದೆ.
ಬಿಳಿಯ ಬಣ್ಣದವರಿಗೆ ಲೋಕವೆಲ್ಲಾ ಕಲರ್ ಪುಲ್. ಹಾಗಿದ್ದರೂ ಕಡುನೀಲಿ, ಕಡು ಹಸಿರು, ಟೊಮೆಟೊ ಕೆಂಪು, ಕಪ್ಪು, ಗಾಢವಾದ ನೇರಳೆ, ಬಂಗಾರದ ಕಲರ್ ಸೀರೆ ಬಳಸಬಹುದು. ಆದರೆ ಬಿಳಿಯ ಬಣ್ಣದವರು ಬಿಳಿಯ ಬಣ್ಣದ ಸೀರೆಯನ್ನೇ ಬಳಸುವುದು ಅಷ್ಟೊಂದು ಶೋಭಿಸುವುದಿಲ್ಲ.