ಎಲುಬಿಲ್ಲದ ನಾಲಿಗೆ ಮನಸ್ಸಿಗೆ ಬಂದದ್ದನ್ನು ಹೇಳಿ ಬಿಡುತ್ತದೆ. ಈಗ ತಪ್ಪಿ ಆಡಿದ ಮಾತುಗಳು ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷ ಅಥವಾ ಮಹಿಳೆ ಕೆಲ ರಹಸ್ಯಗಳನ್ನು ನಮ್ಮಲ್ಲಿಯೇ ಇರಿಸಿಕೊಳ್ಳುವುದು ಒಳ್ಳೆಯದು.
ಅವಮಾನ : ನಮಗೆ ಅಪಮಾನವಾಗಿದ್ದರೆ ಆ ವಿಷಯವನ್ನು ನಮ್ಮಲ್ಲಿಯೇ ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಈ ವಿಷಯ ಬೇರೆಯವರಿಗೆ ತಿಳಿದ್ರೆ ಅವರು ನಮ್ಮನ್ನು ಆಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಧನ ಹಾನಿ : ಈಗಿನ ಕಾಲದಲ್ಲಿ ಮನುಷ್ಯನ ಆರ್ಥಿಕ ಪರಿಸ್ಥಿತಿ ಮೂಲಕವೇ ಆತನನ್ನು ಅಳೆಯಲಾಗುತ್ತದೆ. ಆತನ ಬಳಿ ಹಣವಿದ್ದರೆ ಹತ್ತಿರ ಸೇರಿಸಿಕೊಳ್ಳುವ ಜನರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಹಾಗಾಗಿ ನಮಗೆ ಧನ ಹಾನಿಯಾದರೆ ಇದನ್ನು ಬೇರೆಯವರ ಬಳಿ ಹೇಳದಿರುವುದೇ ಒಳಿತು. ಇದು ಸಂಬಂಧವನ್ನು ಹಾಳುವ ಮಾಡುವ ಸಾಧ್ಯತೆ ಇದೆ. ಹಾಗೆ ನಮ್ಮ ಬಳಿ ತುಂಬಾ ಹಣವಿದ್ದರೆ ಆ ವಿಷಯವನ್ನು ಕೂಡ ಮುಚ್ಚಿಡುವುದು ಒಳಿತು.
ಕುಟುಂಬದ ಗಲಾಟೆ : ಕುಟುಂಬದಲ್ಲಿ ಸಣ್ಣ ಪುಟ್ಟ ಗಲಾಟೆಗಳು ಸಾಮಾನ್ಯ. ಈ ಗುಟ್ಟು ನಮ್ಮಲ್ಲಿಯೇ ಇದ್ದರೆ ಒಳ್ಳೆಯದು. ಬೇರೆಯವರಿಗೆ ಗೊತ್ತಾದಲ್ಲಿ ಸಮಾಜದಲ್ಲಿ ನಮ್ಮ ಕುಟುಂಬದ ಘನತೆ ಕಡಿಮೆಯಾಗುತ್ತದೆ. ಕುಟುಂಬ ಹಾಳು ಮಾಡಲು ಬಯಸಿದವರು ಇದರ ಲಾಭ ಪಡೆಯುತ್ತಾರೆ.
ಮಂತ್ರ : ಗುರುಗಳು ಹೇಳಿ ಕೊಡುವ ಮಂತ್ರವನ್ನು ಬೇರೆಯವರಿಗೆ ಹೇಳಬಾರದು. ಮಂತ್ರದಿಂದ ಎಂದಾದ್ರೂ ಫಲ ಸಿಗುತ್ತದೆ. ಅಲ್ಲದೆ ಮಂತ್ರವನ್ನು ಗುಪ್ತವಾಗಿರಿಸುವುದರಿಂದ ಶೀಘ್ರದಲ್ಲಿ ಶುಭ ಫಲ ಲಭಿಸುತ್ತದೆ.
ಗುಪ್ತವಾಗಿರಲಿ ದಾನ : ದಾನವನ್ನು ಹೇಳಿ ಮಾಡಿದ್ರೆ ಫಲ ಸಿಗುವುದಿಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬ ಮಾತೊಂದಿದೆ. ಹಾಗಾಗಿ ಗುಪ್ತವಾಗಿ ದಾನವನ್ನು ಮಾಡುವುದು ಒಳ್ಳೆಯದು.
ಉನ್ನತ ಸ್ಥಾನ : ನೀವು ಉನ್ನತ ಸ್ಥಾನದಲ್ಲಿದ್ದು, ಸಾಕಷ್ಟು ಸನ್ಮಾನ, ಗೌರವ ಸಿಗ್ತಾ ಇದ್ದಲ್ಲಿ ಈ ವಿಷಯವನ್ನು ಯಾರಿಗೂ ಹೇಳಬೇಡಿ. ಇದು ಅಹಂಕಾರವೆನಿಸಿಬಿಡುತ್ತದೆ. ಇದರಿಂದ ನಿಮ್ಮ ಖ್ಯಾತಿ ಕುಗ್ಗುತ್ತದೆ.
ಏಕಾಂತ : ಏಕಾಂತದಲ್ಲಿ ಕಳೆಯುವ ವಿಚಾರವನ್ನು ಯಾರಿಗೂ ಹೇಳಬಾರದು. ಸಂಗಾತಿ ಜೊತೆಗಿನ ವಿಶೇಷ ಕ್ಷಣಗಳು ಬೇರೆಯವರ ಬಾಯಿಗೆ ಬಿದ್ದಲ್ಲಿ ಅದು ತಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.