ಸುಂದರವಾದ ತ್ವಚೆಯು ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತ್ವಚೆಯನ್ನು ಚಳಿಯಿಂದ, ಬಿಸಿಲಿನಿಂದ, ಧೂಳಿನಿಂದ ರಕ್ಷಿಸಬೇಕಾದ್ದು ಬಹು ಮುಖ್ಯ.
ಮುಖದ ಅಂದವನ್ನು ಹೆಚ್ಚಿಸಲು ಚರ್ಮ, ಕಲೆರಹಿತವಾಗಿ ನುಣುಪಾಗಿ ಕಾಂತಿಯುತವಾಗಿರಬೇಕು ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯ ವರ್ಧಕ ಕ್ರೀಂ ಗಳನ್ನು ಬಳಸುತ್ತಾರೆ. ಕೆಲವು ಹರ್ಬಲ್ ಗಳನ್ನು ಬಳಸಿಕೊಂಡು ಕಾಂತಿಯುತ ತ್ವಚೆಯನ್ನು ಪಡೆಯಬಹುದು.
ಲೋಳೆಸರ ತ್ವಚೆಯ ರಕ್ಷಣೆಗೆ ವರವಾಗಿದೆ. ಇದರ ರಸವನ್ನು ಮುಖಕ್ಕೆ ಹಚ್ಚಿಕೊಂಡು ಒಂದು ಘಂಟೆ ನಂತರ ತೊಳೆದುಕೊಳ್ಳುವುದರಿಂದ ಮುಖದ ಮೇಲಿನ ಕಂದು ಹಾಗು ಕಪ್ಪು ಕಲೆಗಳನ್ನು ನಿವಾರಿಸಲು ಸಹಕಾರಿ. ಲೋಳೆಸರವನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗುವುವು.
ಸ್ವಲ್ಪ ಹಾಲಿನಲ್ಲಿ ಕಡಲೆ ಹಿಟ್ಟು ಕಲೆಸಿ ಪೇಸ್ಟ್ ಮಾಡಿ ಮುಖಕ್ಕೆ ಪ್ಯಾಕ್ ಹಾಕಿ, ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆಯು ಕಾಂತಿಯುತವಾಗುತ್ತದೆ.
ಮೆಂತೆ ನೆನೆಸಿ ನುಣ್ಣಗೆ ರುಬ್ಬಿ ಸ್ವಲ್ಪ ರೋಸ್ ವಾಟರ್ ನೊಂದಿಗೆ ಮುಖಕ್ಕೆ ಮಸಾಜ್ ಮಾಡಿ, ಒಣಗಿದ ನಂತರ ಮುಖ ತೊಳೆಯುವುದರಿಂದ ಮುಖದ ಚರ್ಮ ನುಣುಪಾಗುತ್ತದೆ.