ನೈಸರ್ಗಿಕವಾಗಿ ಸಿಹಿ ಮತ್ತು ರುಚಿಕರವಾಗಿರುವ ಕ್ಯಾರೆಟ್ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುವ ತರಕಾರಿ. ಏಕೆಂದರೆ ಇದನ್ನು ಬೇಯಿಸದೇ ಹಾಗೆಯೇ ಹಸಿಯಾಗಿ ಕೂಡ ಸೇವಿಸಬಹುದಾದಂತಹ ಮತ್ತು ಅತ್ಯಂತ ಹೆಚ್ಚಿನ ರೀತಿಯ ಪೌಷ್ಟಿಕಾಂಶವನ್ನು ಹೊಂದಿರುವಂತದ್ದಾಗಿದೆ. ಇದನ್ನು ಎಲ್ಲಾ ದೇಶದಲ್ಲಿಯೂ ಬೆಳೆಯುತ್ತಾರೆ.
ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಯಥೇಚ್ಛವಾಗಿದ್ದು, ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಇದರಲ್ಲಿರುವ ಕ್ಯಾರೋಟಿನ್ ಅಂಶ ಆ್ಯಂಟಿಆಕ್ಸಿಡೆಂಟ್ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾರೆಟ್ ನಲ್ಲಿ ಸುಲಭವಾಗಿ ಕರಗಬಲ್ಲ ಫೈಬರ್ ಅಂಶವೂ ಇರುವುದರಿಂದ ಜೀರ್ಣಕ್ರಿಯೆಯಲ್ಲಿ ಸಕ್ಕರೆ ಮತ್ತು ಪಿಷ್ಟದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕರಗದೇ ಇರುವ ಫೈಬರ್ ಕೂಡ ಇದೆ. ಅದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಮಾತ್ರ ಅಲ್ಲ ಅದರ ಎಲೆಗಳನ್ನು ಸಹ ತಿನ್ನಬಹುದು. ಈ ಎಲೆಗಳು ಪ್ರೋಟೀನ್, ವಿಟಮಿನ್ಸ್, ಖನಿಜಾಂಶಗಳಿಂದ ಸಮೃದ್ಧವಾಗಿದ್ದು ಪ್ರತ್ಯೇಕ ರುಚಿಯನ್ನು ಹೊಂದಿದೆ.