ಗಸಗಸೆ ಬೀಜಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಎಲ್ಲರ ಅಡುಗೆ ಮನೆಗಳಲ್ಲೂ ಕಂಡು ಬರುವ ಒಂದು ಮಸಾಲೆ ಪದಾರ್ಥ. ಹಿಂದೆಲ್ಲಾ ಹಿರಿಯರು, ಮಕ್ಕಳು ಹೆಚ್ಚು ರಚ್ಚೆ ಹಿಡಿದು ಅಳುತ್ತಿದ್ದರೆ, ಪ್ರಶಾಂತವಾಗಿ ನಿದ್ರೆ ಮಾಡಲೆಂದು ಅವುಗಳಿಗೆ ಗಸಗಸೆಯನ್ನು ರುಬ್ಬಿ, ಹಾಲು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುತ್ತಿದ್ದರು.
ಅಷ್ಟೇ ಅಲ್ಲ, ಗಸಗಸೆಯನ್ನು ಹಲವಾರು ಖಾದ್ಯಗಳಿಗೂ ಉಪಯೋಗಿಸಲಾಗುತ್ತದೆ. ಇದರಲ್ಲಿರುವ ಉತ್ತಮ ಸುವಾಸನೆಯಿಂದ ಮಾಡಿದ ಭಕ್ಷ್ಯಗಳು ಒಳ್ಳೆ ಪರಿಮಳವನ್ನು ಪಡೆದುಕೊಳ್ಳುತ್ತದೆ. ಗಸಗಸೆಯನ್ನು ಉಪಯೋಗಿಸುವುದರಿಂದ ಆಗುವ ಉಪಯೋಗಗಳು ಹೀಗಿವೆ. ಗಸಗಸೆಯಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡಿ, ಮಲಬದ್ಧತೆಯನ್ನು ನಿರ್ಮೂಲನೆ ಮಾಡುತ್ತದೆ.
ಹಾಗೆಯೇ ಅಸಿಡಿಟಿ, ಎದೆಯುರಿ, ಗ್ಯಾಸ್ ಟ್ರಬಲ್ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಹೆಂಗಸರು ಗಸಗಸೆಯನ್ನು ಉಪಯೋಗಿಸುವುದರಿಂದ ಫಲವತ್ತತೆಗೆ ಸಹಾಯಕಾರಿಯಾಗುತ್ತದೆ. ಅಷ್ಟೇ ಅಲ್ಲದೇ ಗರ್ಭಾಶಯವನ್ನು ಶುಚಿಗೊಳಿಸಿ, ಗರ್ಭಾವಸ್ಥೆಯ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಹಕಾರಿ. ನಮ್ಮ ದೇಹವು ಆರೋಗ್ಯವಾಗಿ ಕಾರ್ಯ ನಿರ್ವಹಿಸಲು, ಅದಕ್ಕೆ ಬೇಕಾದ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಗಸಗಸೆಯಲ್ಲಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಗಸಗಸೆಯಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಗೆ, ಮೂಳೆಗಳ ಬಲವರ್ಧನೆಗೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿಯಾಗಿದೆ. ನಿಮ್ಮ ದಿನನಿತ್ಯದ ಆತಂಕಗಳು ಮತ್ತು ಒತ್ತಡದಿಂದ ಹೊರಬರಲು ಗಸಗಸೆಯ ಹಾಲನ್ನು ಕುಡಿದು ದೇಹವನ್ನು ಶಾಂತಗೊಳಿಸಬಹುದು. ಒಟ್ಟಿನಲ್ಲಿ ದೇಹದ ಯಾವುದೇ ರೀತಿಯ ಖಾಯಿಲೆಗಳಿಗೆ ನೈಸರ್ಗಿಕವಾಗಿ ಕಡಿಮೆ ಮಾಡುವಲ್ಲಿ ಗಸಗಸೆ ಬಹಳ ಸಹಾಯಕಾರಿಯಾಗಿದೆ.