ಸೈನಸ್ ಈಗ ಸರ್ವೇ ಸಾಮಾನ್ಯ ಎಂಬಂತಹ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಲ್ಲಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ತಲೆನೋವು. ಅದರ ಜೊತೆಜೊತೆಗೆ ದೃಷ್ಟಿ ಕೂಡ ದುರ್ಬಲವಾಗುತ್ತದೆ, ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ. ಈ ಸೈನಸ್ ಗೆ ಮನೆಯಲ್ಲೇ ನೀವು ಚಿಕಿತ್ಸೆ ಮಾಡಿಕೊಳ್ಳಬಹುದು.
ನೀರನ್ನು ಕುದಿಸಿ ಅದನ್ನು ತಣ್ಣಗಾಗಿಸಿ. ಬಳಿಕ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಜಲನೇತಿ ಮಾಡಿ. ಜಲನೇತಿ ಮಾಡಲು ಅನುಕೂಲವಾಗುವಂತಹ ಲೋಟಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಜಲನೇತಿ ಮಾಡಿದ್ರೆ ಸೈನಸ್ ಮಾಯವಾಗುತ್ತದೆ.
ಆಯುರ್ವೇದದಲ್ಲೂ ಇದಕ್ಕೆ ಪರಿಹಾರವಿದೆ. ಅದಕ್ಕೆ ನಸ್ಯಂ ಎಂದು ಕರೆಯಲಾಗುತ್ತದೆ. ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡು ನಂತರ ಹಬೆಯನ್ನು ತೆಗೆದುಕೊಳ್ಳಬೇಕು. ಅದಾದ ಮೇಲೆ ಬಾದಾಮಿ ಎಣ್ಣೆಯ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿಕೊಂಡರೆ ಸೈನಸ್ ಕಡಿಮೆಯಾಗುತ್ತದೆ.
ಸೈನಸ್ ಸಮಸ್ಯೆ ಇರುವವರು ರಾತ್ರಿ ತಣ್ಣಗಿನ ಊಟ ಮಾಡಬೇಡಿ. ಕೋಲ್ಡ್ ಡ್ರಿಂಕ್ಸ್ ಕುಡಿಯಬೇಡಿ. ರಾತ್ರಿ ಹುಳಿ ಪದಾರ್ಥಗಳು ಮತ್ತು ಅನ್ನ ಸೇವನೆ ಕೂಡ ಮಾಡಬೇಡಿ. ಉಪ್ಪಿನಕಾಯಿ, ಮೊಸರು, ಮೈದಾದಿಂದ ಮಾಡಿದ ತಿನಿಸುಗಳು, ಕರಿದ ತಿಂಡಿ ಬೇಡವೇ ಬೇಡ. ಅವನ್ನೆಲ್ಲ ತಿಂದರೆ ಸೈನಸ್ ಸಮಸ್ಯೆ ಅಧಿಕವಾಗುತ್ತದೆ.
ಸೈನಸ್ ನಿಂದ ಬಳಲುತ್ತಿರುವವರು ಪ್ರತಿನಿತ್ಯ ಹಬೆ ತೆಗೆದುಕೊಳ್ಳುವುದು ಉತ್ತಮ. ಆ ನೀರಿನಲ್ಲಿ ಪೆಪ್ಪರ್ಮಿಂಟ್ಸ್ ತೈಲದ ಹನಿಗಳನ್ನು ಹಾಕಿ ಹಬೆ ತೆಗೆದುಕೊಂಡ್ರೆ ಆರಾಮದಾಯಕ ಎನಿಸುತ್ತದೆ. ಯಾಕಂದ್ರೆ ಅದು ಬ್ಯಾಕ್ಟೀರಿಯಾ ಹೊಡೆದೋಡಿಸುವ ಜೊತೆಗೆ ಫಂಗಲ್ ಇನ್ಫೆಕ್ಷನ್ ಅನ್ನು ಕೂಡ ದೂರ ಮಾಡುತ್ತದೆ.