ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ಜೊತೆ ಮಹಿಳೆಯೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಚ್ ಎಸ್ ಆರ್ ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರ ಜೊತೆ ಮೋನಿಕಾ ಎಂಬ ಮಹಿಳೆ ಎಸ್ಕೇಪ್ ಆಗಿದ್ದಾರೆ. ಮೊದಲ ಗಂಡನನ್ನು ಬಿಟ್ಟು ಎರಡನೇ ಮದುವೆಯಾಗಿದ್ದ ಮೋನಿಕಾ, ಈಗ ಎರಡನೇ ಗಂಡನಿಗೂ ಕೈಕೊಟ್ಟು ಪೊಲೀಸ್ ಕಾನ್ಸ್ ಟೆಬಲ್ ಜೊತೆ ಪರಾರಿಯಾಗಿದ್ದಾಳೆ. ಮಹಿಳೆ ಮೋನಿಕಾಗೆ 12 ವರ್ಷದ ಓರ್ವ ಮಗನಿದ್ದಾನೆ. ಕಾನ್ಸ್ ಟೇಬಲ್ ರಾಘವೇಂದ್ರಗೆ ಕೂಡ ಈಗಾಗಲೇ ಮದುವೆಯಾಗಿ ಮಗಳಿದ್ದಾಳೆ.
ಕಳೆದ ಜೂನ್ ನಲ್ಲಿ ಮೋನಿಕಾ ಹಾಗೂ ರಾಘವೇಂದ್ರ ಇಬ್ಬರೂ ಇನ್ ಸ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದರು. ಇಬ್ಬರೂ ರೀಲ್ಸ್ ವಿಡಿಯೋಗಳನ್ನು ಹಾಕುತ್ತಿದ್ದರು. ಹೀಗೆ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಸೇರಿ ಎಸ್ಕೇಪ್ ಆಗಲು ಪಕ್ಕಾ ಪ್ಲಾನ್ ಮಾಡಿ ಕಳೆದ ಮೂರು ತಿಂಗಳ ಹಿಂದೆ ಮೋನಿಕಾ ತನ್ನ ಪತಿಯ ವಿರುದ್ಧ ಆರೋಪ ಮಾಡಿ, ಹೆಚ್ ಎಸ್ ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಳು. ಪತಿ ತನಗೆ ಕಿರುಕುಳ ನೀಡುತ್ತಿದ್ದು, ಕರೆದು ಬುದ್ಧಿ ಹೇಳಿ ಎಂದಿದ್ದಳು.
ಆಕೆಯ ದೂರಿನ ಮೇರೆಗೆ ಪೊಲೀಸರು ಮೋನಿಕಾ ಪತಿಯನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದರು. ಇದಾದ ಬಳಿಕ ಮೋನಿಕಾ ಹಾಗೂ ಪಿಸಿ ರಾಘವೇಂದ್ರ ಪ್ರತಿದಿನ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಪತಿ ಹೊರಗೆ ಹೋಗಿದ್ದ ವೇಳೆ ಮೋನಿಕಾ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣದೋಚಿ ಪಿಸಿ ರಾಘವೇಂದ್ರ ಜೊತೆ ಎಸ್ಕೇಪ್ ಆಗಿದ್ದಾಳೆ.
ಈ ಬಗ್ಗೆ ಮೋನಿಕಾ ಪತಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಕಾನ್ಸ್ ಟೇಬಲ್ ರಾಘವೇಂದ್ರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮದುವೆಯಾಗಿ ಮಗು ಇದ್ದರೂ ಮತ್ತೊಂದು ಸ್ತ್ರೀ ಪ್ರೇಮ ಪಾಶಕ್ಕೆ ಬಿದ್ದ ಪಿಸಿ ಈಗ ಕೆಲಸವನ್ನೂ ಕಳೆದುಕೊಂಡಿದ್ದಾನೆ.
