ರಾಜ್ಯದ ಪ್ರತಿ ಕುಟುಂಬಕ್ಕೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಸರ್ಕಾರ ಮುಂದಾಗಿದೆ. ಈ ಉದ್ದೇಶದಿಂದ ‘ಕುಟುಂಬ ಸಂಖ್ಯೆ’ ವ್ಯವಸ್ಥೆ ರೂಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಸೂದೆ ಸಿದ್ಧಪಡಿಸಲಾಗಿದೆ.
ಸರ್ಕಾರದ ಎಲ್ಲಾ ಯೋಜನೆಗಳನ್ನು ಈ ಕುಟುಂಬ ಸಂಖ್ಯೆ ಆಧರಿಸಿ ಫಲಾನುಭವಿಗಳಿಗೆ ತಲುಪಿಸಲಾಗುವುದು. ಇದಕ್ಕಾಗಿ ‘ಕರ್ನಾಟಕ ಕುಟುಂಬ ಮಾಹಿತಿ ಮತ್ತು ನಿರ್ವಹಣೆ ಮಸೂದೆ -2025’ಅನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸರ್ಕಾರದ ಯಾವುದೇ ಕಲ್ಯಾಣ ಕಾರ್ಯಕ್ರಮ, ಪ್ರಮಾಣ ಪತ್ರ, ಸೌಲಭ್ಯ, ಸಹಾಯಧನ, ಪರವಾನಿಗೆ, ಹೀಗೆ ಎಲ್ಲಾ ರೀತಿಯ ಪರಿಹಾರ ಯೋಜನೆಗಳನ್ನು ಈ ಕುಟುಂಬ ಸಂಖ್ಯೆ ಆಧಾರದಲ್ಲಿಯೇ ನೀಡಬಹುದಾಗಿದೆ. ಈ ವ್ಯವಸ್ಥೆಯನ್ನು ನಿರ್ವಹಿಸಲು ಕರ್ನಾಟಕ ಕುಟುಂಬ ಮಾಹಿತಿ ಮತ್ತು ನಿರ್ವಹಣೆ ಪ್ರಾಧಿಕಾರ ಸ್ಥಾಪಿಸಲಾಗುವುದು. ಕುಟುಂಬ ತಂತ್ರಾಂಶ ವ್ಯವಸ್ಥೆಯ ಮೂಲಕ ರಾಜ್ಯದ ಪ್ರತಿ ಕುಟುಂಬದ ವಿವರಗಳನ್ನು ನಮೂದಿಸಿ ಮಾಹಿತಿ ಪಡೆಯಲು, ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
