ಬೆಂಗಳೂರು: ವೈದ್ಯೆಯ ಪ್ರಜ್ಞೆ ತಪ್ಪಿಸಿ ಅವರ ಮೈ ಮೇಲೆ ಹಾಗೂ ಮನೆಯಲ್ಲಿದ್ದ ಆಭರಣ ದೋಚಿ ನೇಪಾಳ ದಂಪತಿ ಪರಾರಿಯಾಗಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭರತ್ ನಗರದಲ್ಲಿ ಘಟನೆ ನಡೆದಿದೆ. ಸ್ತ್ರೀರೋಗ ತಜ್ಞೆ ಡಾ. ಲಲಿತಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣೆ ಪೋಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಒಂದು ತಿಂಗಳ ಹಿಂದೆ ಮನೆ ಕೆಲಸಕ್ಕೆ ಸೇರಿಕೊಂಡಿದ್ದ ನೇಪಾಳದ ದಂಪತಿ ಮನೆಯ ನೆಲಮಹಡಿಯಲ್ಲಿ ವಾಸವಾಗಿದ್ದರು. ಡಾ. ಲಲಿತಾ ಅವರ ಪತಿ ಕೂಡ ವೈದ್ಯರಾಗಿದ್ದಾರೆ. ಪುತ್ರ ಎಂಬಿಬಿಎಸ್ ಓದುತ್ತಿದ್ದು, ವೈದ್ಯ ದಂಪತಿಯ ಮನೆಯಲ್ಲಿ ಹೆಚ್ಚಿನ ಹಣ, ಚಿನ್ನಾಭರಣ ಇರುವ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು ಕೆಲಸಕ್ಕೆ ಸೇರಿಕೊಂಡು ಕೃತ್ಯವಸಗಿದ್ದಾರೆ.
ಡಿಸೆಂಬರ್ 2ರಂದು ಅನಾರೋಗ್ಯದ ಕಾರಣ ಲಲಿತಾ ಅವರ ಪುತ್ರ ಬೇಗನೆ ಮಲಗಿದ್ದಾರೆ. ರಾತ್ರಿ ಲಲಿತಾ ಅವರಿಗೆ ಊಟದಲ್ಲಿ ಔಷಧ ಬೆರೆಸಿ ನೇಪಾಳ ದಂಪತಿ ಕೊಟ್ಟಿದ್ದು, ಲಲಿತಾ ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ಅವರ ಕುತ್ತಿಗೆಯಲಿದ್ದ 40 ಗ್ರಾಂ ಸರ, 15 ಗ್ರಾಂ ತೂಕದ ಎರಡು ಬಳೆ ಸೇರಿದಂತೆ ಒಟ್ಟು 55 ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಲಲಿತಾ ಅವರ ಮರುದಿನ ಬೆಳಿಗ್ಗೆ ಎದ್ದು ತನ್ನ ಕೊಠಡಿಯಿಂದ ತಾಯಿಯ ಕೊಠಡಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
