ಬೆಳಗಾವಿ: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪಕ್ಷಾತೀತವಾಗಿಲ್ಲ, ಅವರು ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಪರಿಷತ್ ಸದಸ್ಯ ನಾಗರಾಜ್ ಯಾದವ್ ಆರೋಪಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಕಾರ್ಯದರ್ಶಿಗೂ ಪತ್ರ ಬರೆದಿರುವ ನಾಗರಾಜ್ ಯಾದವ್, ಸಭಾಪತಿ ಹೊರಟ್ಟಿ ಪಕ್ಷಾತೀತವಗಿ ನಡೆದುಕೊಳ್ಳುತ್ತಿಲ್ಲ. ಸಭಾಪತಿಯಾದವರು ಎಲ್ಲಾ ಪಕ್ಷಗಳನ್ನು ಒಂದೇ ರೀತಿ ಪರಿಗಣಿಸಬೇಕು. ಆದರೆ ಹೊರಟ್ಟಿಯವರು ಬಿಜೆಪಿಯವರನ್ನು ಓಲೈಸಲು ನಮಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಆಡಳಿತ ಪಕ್ಷಕ್ಕೆ ಒಂದು, ವಿಪಕ್ಷ ಬಿಜೆಪಿಯವರಿಗೆ ಒಂದು ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೊರಟ್ಟಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರ ಫೋನ್ ಕಾಲ್ ಲಿಸ್ಟ್ ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ನೇಮಕಾತಿಯಲ್ಲಿಯೂ ಹೊರಟ್ತಿ ಅವ್ಯವಹಾರ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಿ.ಟಿ.ರವಿ ಅವಾಚ್ಯ ಶಬ್ದ ಬಳಿಸಿದ್ದ ಬಗ್ಗೆ ದೂರು ನೀಡಿದರೆ ಹೊರಟ್ಟಿಯವರು ನಾನು ಆ ಮಾತು ಕೇಳಿಸಿಕೊಂಡಿಲ್ಲ ಎಂದಿದ್ದರು. ನೈತಿಕತೆ ಕಳೆದುಕೊಂಡಮೇಲೆ ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ನಾಗರಾಜ್ ಕಿಡಿಕಾರಿದ್ದಾರೆ.
ನಾಗರಾಜ್ ಯಾದವ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಭಾಪತಿ ಬಸವರಾಜ್ ಹೊರಟ್ಟಿ ನನ್ನ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದರೆ ಒಂದೇ ಒಂದು ನಿಮಿಷ ಕುರ್ಚಿಯಲ್ಲಿ ಕೂರುವುದಿಲ್ಲ. ಸಣ್ಣಪುಟ್ಟ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನೇ ನಾನು ಅಮಾನತು ಮಾಡಿದವನು. ಅನಗತ್ಯವಾಗಿ ಆರೋಪ ಮಾಡಿ ದಾಖಲೆಗಳನ್ನು ಕೊಡದಿದ್ದವರನ್ನು ನಾನು ಹೇಡಿ ಎಂದು ಹೇಳುತ್ತೇನೆ. ನನ್ನ ವಿರುದ್ಧ ಆರೋಪ ಸಾಬೀತು ಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
