ಬೆಂಗಳೂರು: ದೇಶದಾದ್ಯಂತ ಇಂಡಿಗೋ ವಿಮಾನ ಹಾರಟದಲ್ಲಿ ವ್ಯತ್ಯಯ ಹಾಗೂ ಸಾವಿರಾರು ವಿಮಾನ ರದ್ದು ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಅಡಚಣೆಯಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಪರ್ಯಾಯ ಪ್ರಯಾಣ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹಲವಾರು ಎಕ್ಸ್ ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ.
ದೇಶದ ಮಾಹಾನಗರಗಳಿಂದ ಚಲಿಸುವ ಒಟ್ಟು 37 ಎಕ್ಸ್ ಪ್ರೆಸ್ ರೈಲುಗಳಿಗೆ ಹೆಚ್ಚುವರಿ ತಾತ್ಕಾಲಿಕ ಕೋಚ್ ಗಳು ಹಾಗೂ ಟ್ರಿಪ್ ಗಳನ್ನು ಸೇರಿಸಲಾಗಿದೆ. ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಸ್ಲೀಪರ್, ಚೇರ್-ಕಾರ್, ಸೆಕೆಂಡ್-ಎಸಿ, ಥರ್ಡ್ ಎಸಿ ವಿಭಾಗಗಳಲ್ಲಿ ಕಾಯ್ದಿರಿಸಿದ ಪ್ರಯಾಣಕ್ಕಾಗಿ ಎಲ್ಲಾ 116 ಹೆಚ್ಚುವರಿ ಬೋಗಿಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.
ಬೆಂಗಳೂರಿನಿಂದ ಅಗರ್ತಲಾಗೆ ಹೋಗುವ ಹಮ್ಸಫರ್ ಎಕ್ಸ್ ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಎಕ್ಸ್ ಪ್ರೆಸ್, ಎಂಜಿಆರ್ ಚೆನ್ನೈ ಎಕ್ಸ್ ಪ್ರೆಸ್, ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ಮುಂಬೈ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ಚೆನ್ನೈ ಬೀಚ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಅಳವಡಿಸಲಾಗಿದೆ.
