ವಾಷಿಂಗ್ಟನ್: ಜನ್ಮಸಿದ್ಧ ಪೌರತ್ವ ರದ್ದು ಪಡಿಸುವ ಅಮೆರ್ಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಅಮೆರಿಕದಲ್ಲಿ ತಾತ್ಕಾಲಿಕವಾಗಿ ನೆಲೆಸಿದ ಅಥವಾ ಅಕ್ರಮವಾಗಿ ನೆಲೆಸಿದವರಿಗೆ ಜನಿಸಿದ ಮಕ್ಕಳು ಅಮೆರಿಕದ ನಾಗರಿಕರಲ್ಲ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಲು ಮುಂದಾಗಿರುವ ಜನ್ಮಸಿದ್ಧ ಪೊರತ್ವ ರದ್ದು ಆದೇಶದ ಸಂವಿಧಾನಿಕ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟ್ ಅನುಮತಿ ನೀಡಿದೆ.
ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಟ್ರಂಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳು ಆಲಿಸಲಿದ್ದಾರೆ. ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ಜನ್ಮಸಿದ್ಧ ಪೌರತ್ವ ಹಕ್ಕು ರದ್ದತಿ ಆದೇಶ ದೇಶದಲ್ಲಿ ಎಲ್ಲಿಯೂ ಈವರೆಗೆ ಜಾರಿಯಾಗಿಲ್ಲ. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನಷ್ಟೇ ವಾದ-ಪ್ರತಿವಾದಗಳು ನಡೆಯಬೇಕಿದೆ. 2026ರ ಮಾರ್ಚ್-ಏಪ್ರಿಲ್ ವೇಳೆಗೆ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು, ತೀವ್ರ ಕುತೂಹಲ ಮೂಡಿಸಿದೆ.
ಡೊನಾಲ್ಡ್ ಟ್ರಂಪ್ 2025 ಜನವರಿ 20ರಂದು ಜನ್ಮದತ್ತ ಪೌರತ್ವ ಹಕ್ಕು ರದ್ದು ಆದೇಶಕ್ಕೆ ಸಹಿ ಹಾಕಿದ್ದು, ಈ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಪೌರತ್ವ ಸಿಗುವುದನ್ನು ನಿರ್ಬಂಧಿಸಲು ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶವನ್ನು ಜನವರಿ ೨೪ರಂದು ಸಿಯಾಟಲ್ ನ ಫೆಡರಲ್ ನ್ಯಾಯಾಲಯವು ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ತಡೆ ನೀಡಿ ಆದೇಶ ಹೊರಡಿಸಿತ್ತು. ಟ್ರಂಪ್ ಆದೇಶವನ್ನು ವಾಷಿಂಗ್ಟನ್, ಅರಿಜೋನಾ, ಇಲಿಯಾನ್ಸ್, ಒರೆಗಾನ್ ರಾಜ್ಯಗಳು ಕೂಡ ಪ್ರಶ್ನಿಸಿದ್ದವು. ಒಟ್ಟು 22 ರಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದವು.
