ಬೆಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಇಂಡಿಗೋ ವಿಮಾನ ಹಾರಾಟ ದಿಢೀರ್ ರದ್ದಾಗಿದ್ದು ಪ್ರಯಾಣಿಕರು ಪೇಚಿಗೆ ಸಿಲುಕಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ, ಆಕ್ರೋಶ ತಾರಕಕ್ಕೇರಿದೆ. ಇನ್ನೊಂದೆಡೆ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಗಳ ಆದಾಯದಲ್ಲಿಯೂ ಭಾರಿ ಇಳಿಕೆಯಾಗಿದೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿರುವುದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳ ಭಾಗದಲ್ಲಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದರೆ, ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ವಿವಿಧೆಡೆ ತೆರಳುವ ಬಸ್ ಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದು, ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿಗೂ ಹೊಡೆತ ಬಿದ್ದಿದೆ.
ವಿಮಾನ ನಿಲ್ದಾಣದಲ್ಲಿ ಸಾಮಾನ್ಯವಾಗಿ ಬಿಎಂಟಿಸಿ ಬಸ್ ಗಳು ಪ್ರಯಾಣಿಕರಿಂದ ತುಂಬಿರುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಕರಿಲ್ಲದೇ ಬಸ್ ಗಳು ಖಾಲಿ ಹೊಡೆಯುತ್ತಿವೆ. ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇಂಡಿಗೋ ವಿಮಾನ ರದ್ದಾಗಿರುವುದರಿಂದ ಏರ್ ಪೋರ್ಟ್ ಗೆ ಬರುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಏರ್ ಪೋರ್ಟ್ ಬಸ್ ನಿಲ್ದಾಣ ಬಣಗುಡುತ್ತಿದೆ.
