ಶಿವಮೊಗ್ಗ : ಮೋಸದಿಂದ ಕಟಾವಣೆಯಾದ ಮೊತ್ತದ ಕುರಿತು ಸರಿಯಾದ ಕ್ರಮ ಕೈಗೊಳ್ಳದ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರರಾದ ದೇವಾಪ್ರಸಾದ್, ಶಾಂತಿನಗರ, ಶಿವಮೊಗ್ಗ, ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್, ವಿನೋಬನಗರ ಶಾಖೆ, ಶಿವಮೊಗ್ಗ, ಯೂನಿಯನ್ ಬ್ಯಾಂಕ್, ರೀಜಿನಲ್ ಆಫೀಸ್, ಶಿವಮೊಗ್ಗ, ಇವರ ವಿರುದ್ಧ ದೂರನ್ನು ಸಲ್ಲಿಸಿ, 1ನೇ ಎದುರುದಾರರ ಬ್ಯಾಂಕಿನ ಹಲವು ವರ್ಷಗಳಿಂದ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ದಿ: 24/05/2024 ರಂದು ಸಂಜೆ ಸುಮಾರು 6.34 ಕ್ಕೆ ರೂ.1,85,500/- ಖಾತೆಯಿಂದ ಕಟಾವಾಗಿರುವುದಾಗಿ ದೂರುದಾರರ ಪೋನ್ಗೆ ಸಂದೇಶ ಬಂದಿರುತ್ತದೆ.
ಈ ವಿಷಯವನ್ನು ದೂರುದಾರರು 1ನೇ ಎದುರುದಾರ ಬ್ಯಾಂಕ್ಗೆ ವರದಿ ಮಾಡಿ, ಇದು ಅನಧಿಕೃತವಾದ/ಮೋಸದ ವ್ಯವಹಾರವಾಗಿರುತ್ತದೆ. ಆದ್ದರಿಂದ ಸದರಿ ಮೊತ್ತ ಪಾವತಿ ತಡೆ ಹಿಡಿಯಲು ತಿಳಿಸಿದ್ದು, 1ನೇ ಎದುರುದಾರರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ತದನಂತರ, ದೂರುದಾರರು ಸೈಬರ್ ಕ್ರೈಂ ಪೋಲಿಸ್ ಠಾಣೆ, ಶಿವಮೊಗ್ಗ, ಇವರಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ದೂರುದಾರರು 4ನೇ ಎದುರುದಾರರಿಗೆ ನೋಟೀಸ್ ನೀಡಿರುತ್ತಾರೆ. ನೋಟೀಸ್ ತಲುಪಿದ್ದು ಯಾವುದೇ ಕ್ರಮ/ಪ್ರತ್ಯುತ್ತರವನ್ನು ನೀಡದೇ ಅನಧಿಕೃತವಾಗಿ ಕಟಾವಣೆ ಆದ ಮೊತ್ತವನ್ನು ದೂರುದಾರರ ಖಾತೆಗೆ ಮರು ಜಮೆ ಮಾಡದೇ ಸೇವಾ ನ್ಯೂನತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ನಿಯಮಾನುಸಾರ ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಸುತ್ತೋಲೆ ದಿ: 06/07/2017 ರಂತೆ, ಎದುರುದಾರರು ಅನಧಿಕೃತವಾಗಿ/ಮೋಸದಿಂದ ಕಟಾವಣೆಯಾದ ಮೊತ್ತದ ಕುರಿತು ಸರಿಯಾದ ಕ್ರಮವನ್ನು ಕೈಗೊಳ್ಳದಿರುವುದರಿಂದ, ಮರುಜಮೆ ಮಾಡದಿರುವುದರಿಂದ, ಸೇವಾನ್ಯೂನತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ. ದೂರನ್ನು ಪುರಸ್ಕರಿಸಿ, 1 ಮತ್ತು 2ನೇ ಎದುರುದಾರರು ದೂರುದಾರರಿಗೆ ರೂ.1,85,500/-ಗಳಿಗೆ ದಿನಾಂಕ:24/05/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ರಂತೆ ಬಡ್ಡಿಯನ್ನು ಸೇರಿಸಿ, 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು, ಹಾಗೂ ರೂ.10,000/-ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ ದಿನದಿಂದ 45 ದಿನಗಳ ಒಳಗೆ ಪಾವತಿಸುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ನೀಡಬೇಕೆಂದು ಎಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದಿನಾಂಕ: 29/11/2025 ರಂದು ಆದೇಶಿಸಿದೆ.
