ನವದೆಹಲಿ: ಸುಂಕ ಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆಯನ್ನು ಹೊರಗಿಡಬೇಕು, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರು ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಸಂಸತ್ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ನಿಯಮ 377ರ ಅಡಿ ಈ ವಿಚಾರ ಪ್ರಸ್ತಾಪಿಸಿದ ಅವರು, ನೆರೆಯ ಶ್ರೀಲಂಕಾ, ಮಯನ್ಮಾರ್, ಭೂತಾನ್ ನಿಂದ ಸುಂಕ ಮುಕ್ತ ಅಡಿಕೆ ಆಮದಾಗುತ್ತಿದ್ದು, ರಾಜ್ಯದ ರೈತರು ಸೇರಿದಂತೆ ದೇಶದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ನೆರೆಯ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ವ್ಯಾಪಾರ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲು ಭಾರತ ಸುಂಕ ಮುಕ್ತ ವ್ಯವಸ್ಥೆಯಡಿ ಶೂನ್ಯ ಸುಂಕ ವಿಧಿಸುತ್ತಿದೆ. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದೇಶಗಳಿಂದ ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಅಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ತರುತ್ತಿದ್ದು ಇದರಿಂದ ಸಹಜವಾಗಿ ಅಡಿಕೆ ದರ ದೇಶದಲ್ಲಿ ಕುಸಿತವಾಗಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಭೂತಾನ್, ಮಯನ್ಮಾರ್, ಶ್ರೀಲಂಕಾದಿಂದ ಭಾರಿ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಿಕೆ ಪೂರೈಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. 2023- 24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದಿಸಿದೆ. ಕರ್ನಾಟಕದಲ್ಲಿ ಸುಮಾರು 10 ಲಕ್ಷ ಟನ್ ಅಡಿಕೆ ಉತ್ಪಾದಿಸಿದ್ದು, ದೇಶದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಡಿಕೆ ಉತ್ಪಾದನೆಯಾಗುತ್ತಿದೆ. ಹೀಗಿರುವಾಗ ನೆರೆಯ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕ ಪಾವತಿ ವ್ಯವಸ್ಥೆಯಡಿ ಆಮದು ಮಾಡುವ ಅಗತ್ಯವಿಲ್ಲ. ಇದರಿಂದ ಅಡಿಕೆ ದರ ಕುಸಿತವಾಗಿ ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗುತ್ತಿದೆ ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆ ದೇಶಗಳಿಂದ ಸುಂಕ ಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆ ಹೊರಗಿಡಬೇಕು. ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರು ಸ್ಥಾಪಿಸಬೇಕು. ಈ ಮೂಲಕ ಅಡಿಕೆ ಬೆಳೆಗಾರ ರೈತರ ಹಿತ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
