ದಾವಣಗೆರೆ: ಸರ್ಕಾರಿ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಿದ್ದು ಪ್ರತಿ ಹೋಬಳಿಗೆ ಒಂದು ವಸತಿ ಶಾಲೆ ತೆರೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಾಕಿ ಇರುವ 65 ಹೋಬಳಿಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ವಸತಿ ಶಾಲೆ ತೆರೆಯಲಾಗುವುದು. ಸರ್ಕಾರಿ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಫಲಿತಾಂಶ ಉತ್ತಮವಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡ 94 ರಷ್ಟು ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಶೇಕಡ 50ರಷ್ಟು ಸೀಟು ಹಂಚಿಕೆ ಮಾಡಲಾಗುವುದು. ದೇವದಾಸಿ, ಅಲೆಮಾರಿ ಚಿಂದಿ ಆಯುವ ಪೋಷಕರ ಮಕ್ಕಳಿಗೆ ಶೇಕಡ 10ರಷ್ಟು ಸ್ಥಾನ ಮೀಸಲಿಡಲಾಗುವುದು. ಪರೀಕ್ಷೆ ಇಲ್ಲದೆ ಈ ವಿದ್ಯಾರ್ಥಿಗಳಿಗೆ ನೇರ ಪ್ರವೇಶ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
