ಬೆಂಗಳೂರು: ರಾಜ್ಯದಲ್ಲಿ ಡಿಜಿಟಲ್ ಮಾದರಿಯ ಇ- ಸ್ಟ್ಯಾಂಪ್ ವ್ಯವಸ್ಥೆ ಕಳೆದ ಅಕ್ಟೋಬರ್ ನಿಂದಲೇ ಜಾರಿಗೆ ಬಂದಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಹಂತ ಹಂತವಾಗಿ ಇ- ಸ್ಟ್ಯಾಂಪ್ ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ- ಛಾಪಾಕ್ಕೆ ಮತ್ತಷ್ಟು ಬಲ ನೀಡಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ -2025 ಜಾರಿಯಾಗಿದೆ. ಇನ್ನು ಮುಂದೆ ಇ- ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದ್ದು, ಇದಕ್ಕೆ ಆಧಾರ್ ದೃಢೀಕರಣ ಕಡ್ಡಾಯ ಮಾಡಲಾಗಿದೆ. ನೋಂದಣಿಯಾಗದ ಅಗ್ರಿಮೆಂಟ್ ಗಳಿಗೂ ಡಿಜಿಟಲ್ ಇ- ಸ್ಟ್ಯಾಂಪ್ ಅನ್ವಯವಾಗುತ್ತದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರುವ ಸ್ಥಳಗಳಿಗೆ ಜನ ಹೋಗಬೇಕಿಲ್ಲ. ಮನೆಯಲ್ಲಿಯೇ ಖರೀದಿಸಬಹುದು. ಇದು ಸಂಪೂರ್ಣ ಆನ್ಲೈನ್ ಭದ್ರತೆಯಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.
ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿರುತ್ತದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದ್ದು, ಕ್ಯೂಆರ್ ಕೋಡ್ ಇರುತ್ತದೆ. ಆಧಾರ್ ನೀಡಿ ಒಟಿಪಿ ಬಂದ ಬಳಿಕ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತದೆಯೋ ಅವರು ಆಧಾರ್ ನೀಡಿ ಒಟಿಪಿ ಬಂದ ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಿದೆ. ಈ ಮೊದಲು ದಾಖಲೆ ಕಳೆದು ಹೋದರೆ ಸಿಗುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿದರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರುತ್ತದೆ ಎಂದು ಹೇಳಿದ್ದಾರೆ.
