ದಾವಣಗೆರೆ: ದರೋಡೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಭಾನುವಾರ ರಾತ್ರಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಕೃತ್ಯಗಳಲ್ಲಿ ಪೊಲೀಸರು ಭಾಗಿಯಾದ ಬಗ್ಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಅವರನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನ 7.11 ಕೋಟಿ ರೂ. ದರೋಡೆ ಪ್ರಕರಣ, ಮಾಲೂರಿನ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದಾವಣಗೆರೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಬೇಷನರಿ ಪಿಎಸ್ಐ ಸೇವೆಯಿಂದ ವಜಾಗೊಂಡಿದ್ದಾರೆ. ಮತ್ತೊಬ್ಬರನ್ನು ಅಮಾನತು ಮಾಡಲಾಗಿದೆ. ವರದಿ ದೊರೆತ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಗೆ ಶಿಸ್ತು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 14 ಸಾವಿರಕ್ಕೂ ಅಧಿಕ ಕಾನ್ಸ್ ಟೆಬಲ್ ಹುದ್ದೆಗಳು ಖಾಲಿ ಇದ್ದು, ಅನೇಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಈಗ 3600 ಪೊಲೀಸ್ ಕಾನ್ಸ್ ಟೆಬಲ್ ಗಳ ನೇಮಕಾತಿಗೆ ಅವಕಾಶ ಸಿಕ್ಕಿದೆ. 600 ಪಿಎಸ್ಐ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
