ಹಾವೇರಿ: ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇದೇ ರೀತಿ ಮುಂದುವರೆದರೆ ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾಯಿ, ಕೇಂದ್ರದ ಕಾಂಗ್ರೆಸ್ ನಾಯಕರು ಕುರ್ಚಿ ಕಿತ್ತಾಟ ಬಗೆ ಹರಿಸಲು ಎರಡು ಮೂರು ಸೂತ್ರ ಕೊಟ್ಟರೂ ಇಬ್ಬರೂ ನಾಯಕರೂ ಒಪ್ಪುತ್ತಿಲ್ಲ. ಇಬ್ಬರನ್ನೂ ಬಿಟ್ಟು ಬೇರೆ ಸೂತ್ರ ತಯಾರು ಮಾಡುವ ಮಾಹಿತಿ ಇದೆ. ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿದೆ. ಆಡಳಿತ ಸಂಪೂರ್ಣ ಕುಸಿತಗೊಂಡಿದೆ. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇಬ್ಬರೂ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದೇ ಥರ ಮುಂದೆ ನಡೆದರೆ ರಾಜ್ಯದ ರಾಜಕೀಯ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗ ಕಾಣದಿರುವ ಕುದುರೆ ಕಾಣಬಹುದು. ಫೋಟೊದಲ್ಲಿ ಇರುವ ಕುದುರೆ ಓಡುವುದಿಲ್ಲ. ರಾಜ್ಯದಲ್ಲಿ ಏನಾದರೂ ಆಗಬಹುದು ಎಂದು ಹೇಳಿದರು.
