ಬೆಂಗಳೂರು : ಪಾಲಿಕೆ ವ್ಯಾಪ್ತಿಯ ಎಲ್ಲಾ ಹೋಟೆಲ್ ಗಳಲ್ಲಿ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಶೌಚಾಲಯ ಬಳಕೆ ಮಾಡಲು ಅನುಮತಿಸುವಂತೆ ಆದೇಶ ಹೊರಡಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರವರ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ತಿಳಿಸಿದರು.
ಅವರು ಇಂದು ಯಲಹಂಕದ ಎನ್.ಇ.ಎಸ್ ಬಳಿ ಇರುವ ಡಾ: ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಆಟೋ ಟಿಪ್ಪರ್ ಚಾಲಕರು, ಇತರೆ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಕುಂದುಕೊರತೆ ಬಗ್ಗೆ ಆಯೋಜಿಸಲಾಗಿದ್ದ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಶೌಚಾಲಯವಿಲ್ಲದೆ ತುಂಬಾ ತೊಂದರೆ ಆಗುತ್ತಿರುವ ಬಗ್ಗೆ ಮಹಿಳಾ ಪೌರ ಕಾರ್ಮಿಕರಿಂದ ದೂರುಗಳು ಕೇಳಿಬರುತ್ತಿದ್ದು, ಶೌಚಾಲಯ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆಯಾಗಿ ತಾತ್ಕಾಲಿಕವಾಗಿ ಪೌರಕಾರ್ಮಿಕರಿಗೆ ಉದ್ಯಾನವನಗಳಲ್ಲಿ ಹಾಗೂ ಪಾಲಿಕೆ ವ್ಯಾಪ್ತಿಯ ಎಲ್ಲಾ ಹೋಟೆಲ್ ಗಳಲ್ಲಿ ಶೌಚಾಲಯವನ್ನು ಬಳಕೆ ಮಾಡಲು ಅನುವಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳ ಉಪಯೋಗಕ್ಕಾಗಿ ಸುವಿಧಾ ವಿಶ್ರಾಂತಿ ಕೊಠಡಿಗಳಿಲ್ಲದ ಕಡೆ ಎಲ್ಲಾ ಮಸ್ಟರಿಂಗ್ ಪಾಯಿಂಟ್ಗಳಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು
ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಬೇಕು, ಇದರಿಂದ ಅವರಿಗೆ ಏನಾದರು ಆರೋಗ್ಯ ಸಮಸ್ಯೆ ಇದ್ದಲಿ ಅವರು ಸೂಕ್ತ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದರು.
ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿ ಯಾಗಬೇಕು, ಸೇವೆಯಲ್ಲಿರುವಾಗಲೇ ಮೃತಪಟ್ಟ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕುಟುಂಬಕ್ಕೆ ನೀಡಬೇಕಾದ ಪರಿಹಾರವನ್ನು ಕೂಡಲೇ ಒದಗಿಸಲು ಕ್ರಮ ವಹಿಸಬೇಕೆಂದರು.
ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಮಕ್ಕಳ ಶಿಕ್ಷಣದ ಶುಲ್ಕ ಮರುಪಾವತಿ ಹಾಗೂ ಮೊರಾರ್ಜಿ ದೇಸಾಯಿ ಮತ್ತು ಇತರೆ ವಸತಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ರಮ ವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಮಾತನಾಡಿ ನಗರ ಪಾಲಿಕೆಯ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಿಡುವಿಲ್ಲದ ನಿರಂತರ ಸೇವೆ ಮಾಡುತ್ತಿರುವ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಬಳಸಲು ಹಿಂಜರಿಕೆ ಪಡದಂತೆ ತಿಳಿಸಿದ ಅವರು, ಯಾರಾದರೂ ತೊಂದರೆ ನೀಡಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಣೆ ಮಾಡಬೇಕು. ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಪೌರ ಕಾರ್ಮಿಕರಿಗೆ ನೀಡಬೇಕಾಗಿರುವ ಸೌಲಭ್ಯಗಳಿಗೆ ಅವಶ್ಯವಿರುವ ಅನುದಾನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮೀಸಲಿರುವ ಅನುದಾನದಲ್ಲಿ ಶೌಚಾಲಯ ನಿರ್ಮಾಣ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು ಎಂದ ಅವರು, ಪ್ರತಿ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಹಂತಹಂತವಾಗಿ ಎಲ್ಲ ರೀತಿಯ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ (ಅಭಿವೃದ್ಧಿ) ಅಪರ ಆಯುಕ್ತರಾದ ಲತಾ. ಆರ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಸುಮಯ್ಯಾ ರೂಹಿ, ಬೆಂಗಳೂರು ಉತ್ತರ ನಗರ ಪಾಲಿಕೆಯ (ಬ್ಯಾಟರಾಯನಪುರ ವಲಯ) ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಬೆಂಗಳೂರು ಉತ್ತರ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಅವರು ಸೇರಿದಂತೆ ಕಾರ್ಯಪಾಲಕ ಅಭಿಯಂತರರು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೌರಕಾರ್ಮಿಕರು ಮತ್ತು ಲೋಡರ್ಸ್, ಕ್ಲೀನರ್ಸ್ ಮತ್ತು ಡ್ರೈವರ್ಸ್ ಕಾರ್ಮಿಕರು ಉಪಸ್ಥಿತರಿದ್ದರು.
