ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕುವುದು, ಹೀಗೆ ಬಿಸಾಕಿದ ಕಸಗಳಿಗೆ ಬೆಂಕಿ ಹಚ್ಚುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಸಗಳಿಗೆ ಬೆಂಕಿ ಹಾಕುವುದರಿಂದ ಅಕ್ಕ-ಪಕ್ಕದ ನಿವಾಸಿಗಳಿಗೆ ಉಸಿರಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಗಟ್ಟಲು BSWML ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಸಗಳಿಗೆ ಬೆಂಕಿ ಹಾಕಿದರೆ ಅಂತವರ ವಿರುದ್ಧ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ ಕ್ರಿಮಿನಲ್ ಕೇಸ್ ಕೂಡ ದಾಖಲಾಗುತ್ತದೆ. ಮೊದಲ ಬಾರಿ ಕಸಕ್ಕೆ ಬೆಂಕಿ ಹಚ್ಚಿದವರಿಗೆ 10 ಸಾವಿರ ದಂಡ ವಿಧಿಸಲಾಗುವುದು. ಎರಡನೇ ಬಾರಿ ಕಸಕ್ಕೆ ಬೆಂಕಿ ಹಚ್ಚಿದರೆ 20 ಸಾವಿರ ದಂಡ ನಂತರ 5 ಲಕ್ಷದವರೆಗೂ ದಂಡ ವಿಧಿಸಲಾಗುತ್ತದೆ. ಇದಕ್ಕೂ ಕ್ಯಾರೇ ಎನ್ನದಿದ್ದರೆ ನಿಮ್ಮ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಾಗುತ್ತದೆ.
ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್ ಇನ್ಸ್ ಪೆಕ್ಟರ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
