ಬೆಂಗಳೂರು: ರಾಜ್ಯದ ರೈತರಿಗೆ ಹೆಚ್ಚುವರಿ ಬೆಳೆ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಿಡುಗಡೆ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೈತರಿಗೆ ಹೆಚ್ಚುವರಿ ಬೆಳೆ ಪರಿಹಾರಕ್ಕೆ ರೈತರು ಹಾಗೂ ಶಾಸಕರು ಕೂಡ ಮನವಿ ಮಾಡಿದ್ದರು. ಅದರಂತೆ ಹೆಚ್ಚುವರಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರತಿ ಹೆಕ್ಟೆರ್ ಗೆ 8000 ಬೆಳೆಹಾನಿ ಪರಿಹಾರ ನೀಡಲಾಗುತ್ತಿದೆ. ಇಂದು 1033 ಕೋಟಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು. ಎಲ್ಲಾ ಇಲಾಖೆಗಳ ಸಹಕಾರದಿಂದ ಜಂಟಿ ಸಮಿಕ್ಷೆ ಮಾಡಿದ್ದೆವು. ಈಗಾಗಲೇ ರೈತರಿಗೆ 1018 ಕೋಟಿ ಸಂದಾಯವಾಗಿದೆ. ಆದರೆ ಹೆಚ್ಚುವರಿ ಪರಿಹಾರಕ್ಕೆ ರೈತರು ಮನವಿ ಮಾಡಿದ್ದರು. ಹೀಗಾಗಿ ಹೆಚ್ಚುವರಿ ಬೆಳೆ ಪರಿಹಾರವಾಗಿ ಪ್ರತಿ ಹೆಕ್ಟೆರ್ ಗೆ 8000 ರೂ.ನಂತೆ ನೀಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ 14 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ನಾನು ಕೂಡ ಕಲಬುರಗಿ, ಯಾದಗಿರಿ, ಬೀದರ್ ಗಳಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದ್ದೇನೆ. ಮೆಕ್ಕೆಜೋಳ, ಕಬ್ಬು, ತೊಗರಿ ಬೆಳೆ ಹೆಚ್ಚು ನಷ್ಟವಾಗಿದೆ. ಪರಿಹಾರಕ್ಕಾಗಿ ಕೇಂದ್ರಕ್ಕೂ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೂಡ ಬೆಳೆ ಹಾನಿ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದರು.
