ಹೊಸಕೋಟೆ: ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಘೋಷಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಹೊಸಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಯಾರು ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದನ್ನು ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತಾನು ದುರ್ಬಲ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನ ಸಿಎಂ ಯಾರೆಂಬ ಚರ್ಚೆಯಲ್ಲೇ ವ್ಯರ್ಥವಾಗಿಬಿಡುವ ಅಪಾಯವಿದೆ ಎಂದು ಎಚ್ಚರುಕೆ ನೀಡಿದ್ದಾರೆ.
ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರಾ? ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ? ಅಥವಾ ಬೇರೆ ಯಾರಾದರೂ ಸಿಎಂ ಆಗುತ್ತಾರಾ ಎಂಬ ಜನರಲ್ಲಿನ ಗೊಂದಲವನ್ನು ಕಾಂಗ್ರೆಸ್ ವರಿಷ್ಠರು ಹೋಗಲಾಡಿಸುವ ಅಗತ್ಯವಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳು, ನೀರಾವರಿ ಸಮಸ್ಯೆ, ಸರ್ಕಾರಿ ಶಾಲೆ ಮುಚ್ಚುವಿಕೆ ವಿಚಾರಗಳನ್ನು ಬಿಜೆಪಿ-ಜೆಡಿಎಸ್ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಿವೆ. ಅಧ್ವೇಶನದ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪಕ್ಷ ಈಗಾಗಲೇ ತಯಾರಿ ನಡೆಸಿದೆ ಎಂದರು.
