ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಮುರುಘಾ ಮಠದ ಶಿವಮೂರ್ತಿ ಶರಣರು ನಿರ್ದೋಷಿ ಎಂದು ತೀರ್ಪು ನೀಡಿದೆ.
ಚಿತ್ರದುರ್ಗದ ಮುರುಘಾ ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಡ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಮುರುಘಾಶ್ರೀಗಳು ನಿರಂತರ ಲೈಂಗಿಕ ದೌರ್ಜ್ಯವೆಸಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು. 2022 ಆಗಸ್ಟ್ 26ರಂದು ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು, ಬಳಿಕ ಎರಡನೇ ಪೋಕ್ಸೋ ಕೇಸ್ ಕೂಡ ದಾಖಲಾಗಿತ್ತು. ಪ್ರಕರಣದಲ್ಲಿ ಮುರುಘಾ ಶ್ರೀ ಸೇರಿದಂತೆ ಮೂವರು ಆರೋಪಿಗಳು ಜೈಲು ಸೇರಿದ್ದರು.
ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದ ಮೊದಲ ಕೇಸ್ ವಿಚಾರಣೆ ಮುಕ್ತಾಯವಾಗಿದ್ದು, ಇಂದು ಚಿತ್ರದುರ್ಗದ ಎರಡನೇ ಹೆಚ್ಚುವರಿ ಸೆಷನ್ಸ್ ಹಾಗೂ ಜಿಲ್ಲಾ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಪೋಕ್ಸೋ ಪ್ರಕರಣದ ಮೊದಲ ಕೇಸ್ ನಲ್ಲಿ ಮುರುಘಾ ಶ್ರೀ ಸೇರಿದಂತೆ ಮೂವರು ಆರೋಪಿಗಳು ನಿರ್ದೋಷಿಗಳು ಎಂದು ತೀರ್ಪು ನೀಡಿದೆ.
ಪ್ರಕರಣದ ಎ1 ಆರೋಪಿಯಾಗಿದ್ದ ಮುರುಘಾ ಶ್ರೀ,ಎ 2 ಆಗಿದ್ದ ವಾರ್ಡನ್ ರಶ್ಮಿ ಹಾಗೂ ಎ4 ಪರಮಶಿವಯ್ಯ ಸೇರಿದಂತೆ ಮೂವರು ಆರೋಪಿಗಳು ದೋಷಮುಕ್ತರಾಗಿದ್ದು, ನಿರ್ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಕೇಸ್ ನ್ನು ಖುಲಾಸೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ಪೋಕ್ಸೋ ಕೇಸ್ ಆರೋಪ ಹೊತ್ತಿದ್ದ ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದ್ದು, ದೋಷಮುಕ್ತರಾಗಿದ್ದಾರೆ.
ತೀರ್ಪು ಹೊರಬರುತ್ತಿದಂತೆ ಮುರುಘಾ ಶ್ರೀಗಳು ಚಿತ್ರದುರ್ಗದಿಂದ ದಾವಣಗೆರೆಯತ್ತ ಪ್ರಯಾಣಬೆಳೆಸಿದ್ದಾರೆ.
