ಬೆಂಗಳೂರು: ನಿಗದಿತ ಪ್ರದೇಶ, ಸ್ಮಶಾನ ಹೊರತುಪಡಿಸಿ ಬೇರೆ ಖಾಸಗಿ ಸ್ಥಳಗಳಲ್ಲಿ ಯಾರೂ ಕೂಡ ಅನುಮತಿ ಇಲ್ಲದೆ ಶವ ಹೂಳುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ತಮ್ಮ ಮನೆಯ ಎದುರು ಅಕ್ರಮವಾಗಿ ಸೊಸೆಯ ಮೃತದೇಹ ಹೂತು ಹಾಕಲಾಗಿದ್ದು, ಕಾನೂನು ಪ್ರಕಾರ ಹೊರ ತೆಗೆದು ಅಂತ್ಯಸಂಸ್ಕಾರ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಕೋಲಾರ ಜಿಲ್ಲೆ ತುರಂಡಹಳ್ಳಿಯ ಗೋಪಾಲಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ಇದು ಸೂಕ್ಷ್ಮ ಪ್ರಕರಣವಾಗಿದೆ. ಈ ರೀತಿ ಶವ ಹೂಳಲು ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಬಹುದು. ಕೇವಲ ಒಂದು ಶವ ಹೂಳುವ ಪ್ರಶ್ನೆಯಲ್ಲ. ಇದು ಭವಿಷ್ಯದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೈಕೋರ್ಟ್ ಹೇಳಿದೆ
ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ್ದು, ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ಡಿಸೆಂಬರ್ 2ಕ್ಕೆ ವಿಚಾರಣೆ ಮುಂದೂಡಿದೆ.
ಪುತ್ರನೊಂದಿಗಿನ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಸೊಸೆ ಕಳೆದ ವರ್ಷ ಅಕ್ಟೋಬರ್ 24ರಂದು ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಪೋಷಕರು ಕೆಲವು ಸಂಘಟನೆಗಳ ಬೆಂಬಲದೊಂದಿಗೆ ಬಂದು ನಮ್ಮ ಮನೆಯ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡದೆ, ಅನುಮತಿ ಪಡೆಯದೆ, ನಮ್ಮ ಜಮೀನಿನಲ್ಲಿ ಮೃತದೇಹ ಹೂಳಲಾಗಿದೆ. ಮೃತರ ಸಂಬಂಧಿಕರು ಜಾಗ ಅತಿಕ್ರಮಣ ಮಾಡಿ ಸಮಾಧಿ ನಿರ್ಮಿಸಿದ್ದಾರೆ. ಇದನ್ನು ತೆರವುಗೊಳಿಸಬೇಕು ಎಂದು ಗೋಪಾಲಗೌಡ ಅವರು ಕಂದಾಯ ಇಲಾಖೆ ಕೋಲಾರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
