ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಲೀಪ್ ಯೋಜನೆಯಡಿ ಕಲಬುರಗಿಯಲ್ಲಿ 1,000 ಕೋಟಿ‌ ರೂ. ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ

ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ(LEAP – Local Economic Accelerator Program) ಅಡಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಲೀಪ್  ₹ 1,000 ಕೋಟಿ ವೆಚ್ಚದ ಐದು ವರ್ಷಗಳ ಯೋಜನೆಯಾಗಿದೆ. ಪ್ರಾದೇಶಿಕ ಉದ್ಯಮಶೀಲತೆಗೆ ಚೇತರಿಕೆ ನೀಡಲು, ನಾವೀನ್ಯತೆ ವಿಕೇಂದ್ರೀಕರಿಸಲು ಮತ್ತು ರಾಜ್ಯದ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ಇದು ನೆರವಾಗಲಿದೆ.

ಕಲ್ಯಾಣ ಕರ್ನಾಟಕದಾದ್ಯಂತ ಕೃಷಿ-ತಂತ್ರಜ್ಞಾನ, ಗ್ರಾಮೀಣ ನಾವೀನ್ಯತೆ ಮತ್ತು ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜಿಸಲು 15,000 ಚದರ ಅಡಿ ವಿಸ್ತೀರ್ಣದ ಹೊಸ ನವೋದ್ಯಮ ಕೇಂದ್ರ ಹಾಗೂ ಪ್ರಾಥಮಿಕ ಮಾದರಿ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಇದು ಮುಂದಿನ ವರ್ಷದ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ.

ಕೃಷಿಕಲ್ಪ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಉದ್ಯಮಶೀಲತಾ ಕೇಂದ್ರವು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಿದೆ. ಕೃಷಿ, ಸಂಬಂಧಿತ ವಲಯಗಳು, ಗ್ರಾಮೀಣ ನಾವೀನ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.

ಈ ಯೋಜನೆಯ ಭಾಗವಾಗಿ, ಕಲಬುರಗಿ ಜಿಲ್ಲಾಡಳಿತವು 15,000 ಚದರ ಅಡಿ ವಿಸ್ತೀರ್ಣದ ಬಳಕೆಗೆ ಸಿದ್ಧವಾದ ಸ್ಥಳಾವಕಾಶ ಹಂಚಿಕೆ ಮಾಡಿದೆ. ಇದು ಈ ಪ್ರದೇಶಕ್ಕೆ ಮೀಸಲಾದ ನವೋದ್ಯಮ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ಸಂಸ್ಥಾಪಕರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಪೂರಕ ಉದ್ದಿಮೆಗಳ ಪಾಲುದಾರರಿಗೆ ಅಗತ್ಯ ನೆರವು ಒದಗಿಸಲಿದೆ.

ಈ ಕೇಂದ್ರವು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಹಣಕಾಸು ನೆರವಿನ ಲಭ್ಯತೆ ಚೌಕಟ್ಟು ಆಧರಿಸಿ, ನವೋದ್ಯಮಗಳ ವೇಗವರ್ಧನೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ತತ್ವಗಳ ಅಡಿ ಕಾರ್ಯನಿರ್ವಹಿಸಲಿದೆ. ಮೂಲಸೌಲಭ್ಯ ಮತ್ತು ಮಾರುಕಟ್ಟೆ ಲಭ್ಯತೆ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ, ನವೋದ್ಯಮಗಳಿಗೆ ಸ್ಥಳೀಯವಾಗಿ ವಿಶ್ವದರ್ಜೆಯ ನಾವೀನ್ಯತೆಗಳ ವಿನ್ಯಾಸ, ನಿರ್ಮಾಣ ಮತ್ತು ಪರೀಕ್ಷೆಗೆ ಅನುವು ಮಾಡಿಕೊಡಲು ಅತ್ಯಾಧುನಿಕ ಮೂಲಮಾದರಿ ಪ್ರಯೋಗಾಲಯವನ್ನು (ಪ್ರೊಟೊಟೈಪಿಂಗ್ ಲ್ಯಾಬ್) ಸಹ ಸ್ಥಾಪಿಸಲಾಗುವುದು.

ಕಲಬುರಗಿಯು ಗ್ರಾಮೀಣ ಕರ್ನಾಟಕದ ಬಳಕೆಯಾಗದ ಅಪಾರ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ 70 ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ‘ಲೀಪ್’ ಯೋಜನೆಯಡಿ ಮತ್ತು ಹೊಸ ಉದ್ಯಮಶೀಲತಾ ಕೇಂದ್ರದ ಮೂಲಕ ನಾವು ತಂತ್ರಜ್ಞಾನ, ನಾವೀನ್ಯತೆ ಮತ್ತು ಅವಕಾಶಗಳನ್ನು ನೇರವಾಗಿ ನಮ್ಮ ಸಮುದಾಯಗಳಿಗೆ ತಲುಪಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದೇವೆ.

ರಾಜ್ಯದ ಐಟಿ- ಬಿಟಿ ವಲಯದ ವಹಿವಾಟು ₹ 1.5 ಲಕ್ಷ ಕೋಟಿ ದಾಟಿದೆ. ʼಲೀಪ್‌ʼ ಯೋಜನೆಯಡಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ, ಈ ಶ್ರೇಷ್ಠತಾ ಕೇಂದ್ರವು ಕಲಬುರಗಿಯ ಯುವಕರಿಗೆ ಕೃಷಿ-ತಂತ್ರಜ್ಞಾನ, ಡೀಪ್-ಟೆಕ್ ಮತ್ತು ಸಂಬಂಧಿತ ವಲಯದ ನಾವೀನ್ಯತೆಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಿಸಲು ಶಕ್ತಿ ತುಂಬಲಿದೆ.

ಬೆಂಗಳೂರಿನಾಚೆಗೆ (Beyond Bengaluru) ನಾವೀನ್ಯತೆಯ ಪ್ರಯೋಜನವು ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಮಾಡುವ ರಾಜ್ಯ ಸರ್ಕಾರದ ಧ್ಯೇಯವನ್ನು ‘ಲೀಪ್’ ಯೋಜನೆಯು ಪ್ರತಿಬಿಂಬಿಸುತ್ತದೆ. ಕಲಬುರಗಿಯಲ್ಲಿ ಆರಂಭವಾಗಲಿರುವ ಉದ್ಯಮಶೀಲತಾ ಕೇಂದ್ರವು ಈ ಪ್ರದೇಶದ ಕೃಷಿ ಸಾಮರ್ಥ್ಯ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿಕೊಳ್ಳಲಿದೆ. ಗ್ರಾಮೀಣ ನಾವೀನ್ಯಕಾರರು ಸುಸ್ಥಿರ ಮತ್ತು ಸ್ಪರ್ಧಾತ್ಮಕ ಉದ್ಯಮಗಳನ್ನು ಬೆಳೆಸಲು ಅನುವು ಮಾಡಿಕೊಡಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read